ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಣದಕೊಟ್ಟಿಗೆ ನಿವಾಸಿ ಕೃಷಿಕ ಜಿ.ಹುಸೈನರ್ ಮನೆಯ ಪಕ್ಕದ ಗೂಡಿನೊಳಗಿದ್ದ 4 ದೊಡ್ಡ ಆಡುಗಳು ಸತ್ತು 1. ಆಡು ಚಿಂತಾಜನಕ ಸ್ಥಿತಿಯಲ್ಲಿದ್ದ ಘಟನೆ ಎ.19 ರಂದು ನಡೆದಿದೆ.
ಮನೆ ಮಾಲೀಕ ಎಂದಿನಂತೆ ಬೆಳಿಗ್ಗೆ ತನ್ನ ಆಡುಗಳಿಗೆ ಆಹಾರವನ್ನು ನೀಡಲು ಗೂಡಿನ ಬಳಿ ಬಂದಾಗ ವಿಷಯ ತಿಳಿಯಿತು. ಎ.18 ರಂದು ರಾತ್ರಿ ಪಕ್ಕದ ಸಂಬಂಧಿಕರ ಮನೆಗೆ ಹೋಗಿದ್ದರು ಮನೆಯಲ್ಲಿ ಯಾರು ವಾಸವಿರಲಿಲ್ಲ.ಅದುದರಿಂದ ರಾತ್ರಿ ವೇಳೆಯಲ್ಲಿ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಬಗ್ಗೆ ಸಂಶಯವಿದೆ ಎಂದು ಜಿ.ಹುಸೈನರ್ ತಿಳಿಸಿದರು. ಉತ್ತಮ ತಳೀಯ ಮಲಬಾರ್ ಜಾತಿಯ ಆಡುಗಳಾಗಿದ್ದು ಅಂದಾಜು 60 ಸಾವಿರದಷ್ಟು ನಷ್ಟವಾಗಿದೆ ಎಂದು ತಿಳಿಸಿದರು.
ತಣ್ಣೀರುಪಂತ ಪಂಚಾಯತು ವ್ಯಾಪ್ತಿಯ ಬಿಲಾಲ್ ಪಾದೆ ಅಕ್ಕಪಕ್ಕದಲ್ಲಿ ಈ ಮೊದಲು ಚಿರತೆ ಸ್ಥಳೀಯರಿಗೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ನೀಡಿದರು. ತಕ್ಷಣ ಅರಣ್ಯ ಇಲಾಖೆ ಮತ್ತು ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.ಮಡಂತ್ಯಾರು ಹಿರಿಯ ಪಶು ವೈದ್ಯಾಧಿಕಾರಿ ಡಾ| ವಿನಯ ಕುಮಾರ್ ಎಸ್.ಎಮ್. ಸ್ಥಳಕ್ಕೆ ಭೇಟಿ ನೀಡಿ ಸತ್ತ ಆಡುಗಳ ಮರಣೋತ್ತರ ಪರೀಕ್ಷೆ ಮಾಡಿದರು. ಹಾಗೂ ಚಿರತೆ ದಾಳಿಯ ಬಗ್ಗೆ ಸಂಶಯ ವ್ಯಕ್ತ ಪಡಿಸಿದರು.
ತೀವ್ರ ಗಾಯಗೊಂಡ 1 ಆಡಿಗೆ ಚಿಕಿತ್ಸೆ ನೀಡಿದರೂ ಅದು ಕೂಡ ಪ್ರಾಣ ಬಿಟ್ಟಿದೆ. ಈ ಸಂದರ್ಭದಲ್ಲಿ ಕಣಿಯೂರು/ತಣ್ಣೀರುಪಂತ ಉಪ ವಲಯ ಅರಣ್ಯ ಅಧಿಕಾರಿ ಭರತ್ ಪೂಜಾರಿ,ಅರಣ್ಯ ರಕ್ಷಕ ಮಾರುತಿ, ತಣ್ಣೀರುಪಂತ ಪಂಚಾಯತು ಅಧ್ಯಕ್ಷ ಜಯ ವಿಕ್ರಮ್,ಸದಸ್ಯ ಸದಾನಂದ ಶೆಟ್ಟಿ ಮಡಪ್ಪಾಡಿ, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ.ಹಾಗೂ ಸ್ಥಳೀಯರು ಸ್ಥಳದಲ್ಲಿ ಉಪಸ್ಥಿತರಿದ್ದರು.ಸರಕಾರದಿಂದ ಪರಿಹಾರವನ್ನು ನೀಡುವಂತೆ ಅರಣ್ಯ ಇಲಾಖೆಗೆ ವಾರಸುದಾರರು ಮನವಿಯನ್ನು ಸಲ್ಲಿಸಿದರು.