ಬೆಂಗಳೂರು: ಲಾಕ್‍ಡೌನ್ ಮುಗಿಯುತ್ತಿದ್ದಂತೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಹೀಗಾಗಿ ಯಾವುದೇ ವಂದತಿ ಹಾಗೂ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದೆಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ತಮ್ಮ ಕಚೇರಿಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆ, ಆರೋಗ್ಯ ಕುರಿತು ವಿಚಾರಿಸಿದರು. ಹಾಗೂ ಶಿಕ್ಷಣ ಇಲಾಖೆ ವತಿಯಿಂದ ದೂರದರ್ಶನ ಮತ್ತು ಆಕಾಶವಾಣಿ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಎಸೆಸೆಲ್ಸಿ ವಿದ್ಯಾರ್ಥಿಗಳ ಪೂರ್ವಸಿದ್ದತೆಗೆ ಮಾರ್ಗದರ್ಶಿ ತರಗತಿಗಳನ್ನು ಸದ್ಯದಲ್ಲಿಯೇ ಬಿತ್ತರಿಸಲಾಗುವುದು. ಅದರತ್ತ ವಿದ್ಯಾರ್ಥಿಗಳೆಲ್ಲರೂ ಗಮನ ವಹಿಸಬೇಕೆಂದು ಸಲಹೆ ನೀಡಿದ್ದಾರೆ.
ಲಾಕ್‍ಡೌನ್ ಮುಗಿಯುತ್ತಿದ್ದಂತೆ ಪರೀಕ್ಷೆ ಆರಂಭವಾಗುತ್ತೆ. ವಿದ್ಯಾರ್ಥಿಗಳು ಯಾವ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳಬಾರದೆಂದು ಅವರು ಹೇಳಿದರು. ಈ ವೇಳೆ ಸಚಿವ ಸುರೇಶ್‍ಕುಮಾರ್ ಎಸೆಸೆಲ್ಸಿ ಪರೀಕ್ಷೆ ಮಾಡಬೇಕೆ, ಬೇಡವೇ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ, ಪರೀಕ್ಷೆ ಬೇಕು ಸರ್. ನಾವು ಪರೀಕ್ಷೆ ಬರೆಯಲು ಸಿದ್ಧರಿದ್ದೇವೆಂದು ಹೇಳಿದ್ದಾರೆ. ಅಧಿಕಾರಿಗಳ, ಹಮಾಲರ ಮಕ್ಕಳು, ಶಿಕ್ಷಕರ ಮಕ್ಕಳು, ಖಾಸಗಿ ನೌಕರರ ಮಕ್ಕಳು ಸೇರಿದಂತೆ ನಾನಾ ಸಾಮಾಜಿಕ ಸ್ತರಗಳಿಗೆ ಸೇರಿದ ವಿದ್ಯಾರ್ಥಿಗಳೊಂದಿಗೆ ಸಚಿವರು ಮಾತುಕತೆ ನಡೆಸಿದ್ದಾರೆಂದು ಶಿಕ್ಷಣ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಪತ್ರಿಕಾ ಪ್ರಕಣೆಯ ಮೂಲಕ ಮಾಹಿತಿ ನೀಡಿದ್ದಾರೆ.