
ಸುಳ್ಯ: ಗಾಂಧಿನಗರ ಶಾಲಾ ಮೈದಾನದ ಬಳಿ ಎರಡು ಜಾನುವಾರುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಲೆಟ್ಟಿ ನಿವಾಸಿಗಳಾದ ಹಾಶಿರ್ ಎ. (28) ಹಾಗೂ ಸಂಶುದ್ದೀನ್ ಎಸ್.ಎಂ. (25) ಬಂಧಿತ ಆರೋಪಿಗಳು. ನವೆಂಬರ್ 18ರಂದು ಬೆಳಗಿನ ಜಾವ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ಜಾನುವಾರು ಕಳ್ಳತನಕ್ಕೆ ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಸುಳ್ಯ ಠಾಣಾ ಎಸ್‌ಐ ಉದಯ ರವಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದಾಗ, ಮೈದಾನದ ಕಂಬಕ್ಕೆ ಎರಡು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿರುವುದು ಕಂಡುಬಂದಿದೆ.
ತಕ್ಷಣ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳವು ಮಾಡಲು ಯತ್ನಿಸಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಪೊಲೀಸರು ಎರಡು ಜಾನುವಾರುಗಳು ಹಾಗೂ ಕೃತ್ಯಕ್ಕೆ ಬಳಸಲು ತಂದಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


