
ಬೆಳ್ತಂಗಡಿ: ಚಿನ್ನದ ಉಂಗುರ ಖರೀದಿಸುವ ಸೋಗಿನಲ್ಲಿ ಜ್ಯುವೆಲ್ಲರಿ ಮಳಿಗೆಗೆ ಬಂದ ಇಬ್ಬರು ಅಪರಿಚಿತರು, ಮಾಲೀಕರ ಗಮನ ಬೇರೆಡೆ ಸೆಳೆದು ₹4.40 ಲಕ್ಷ ಮೌಲ್ಯದ ಚಿನ್ನದ ಬ್ರೇಸ್‌ಲೆಟ್‌ಗಳನ್ನು ಕಳವು ಮಾಡಿಕೊಂಡು ಪರಾರಿಯಾದ ಘಟನೆ ತಾಲೂಕಿನ ಮಡಂತ್ಯಾರಿನಲ್ಲಿ ನಡೆದಿದೆ.
ಮಡಂತ್ಯಾರಿನ ಆರ್.ಕೆ. ಕಾಂಪ್ಲೆಕ್ಸ್‌ನಲ್ಲಿರುವ ‘ಸಾನಿಧ್ಯ ಜ್ಯುವೆಲ್ಲರೀಸ್’ ಮಳಿಗೆಯಲ್ಲಿ ಈ ಕೃತ್ಯ ನಡೆದಿದೆ. ನವೆಂಬರ್ 16ರಂದು ಸಂಜೆ 6.25ರ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದ ಇಬ್ಬರು ಅಪರಿಚಿತರು, ಉಂಗುರಗಳನ್ನು ವೀಕ್ಷಿಸುವ ನಾಟಕವಾಡಿದ್ದಾರೆ. ಈ ವೇಳೆ ಮಾಲೀಕರ ಗಮನ ಬೇರೆಡೆ ಸೆಳೆದು, ಸುಮಾರು 35 ಗ್ರಾಂ ತೂಕದ (₹4.40 ಲಕ್ಷ ಮೌಲ್ಯದ) 5 ರಿಂದ 6 ಚಿನ್ನದ ಬ್ರೇಸ್‌ಲೆಟ್‌ಗಳಿದ್ದ ಪ್ಯಾಕೆಟ್ ಅನ್ನು ಕ್ಷಣಾರ್ಧದಲ್ಲಿ ಎಗರಿಸಿ ಪರಾರಿಯಾಗಿದ್ದಾರೆ.
ಬಳಿಕ ಆಭರಣಗಳನ್ನು ಜೋಡಿಸುವಾಗ ಬ್ರೇಸ್‌ಲೆಟ್‌ಗಳ ಪ್ಯಾಕೆಟ್ ನಾಪತ್ತೆಯಾಗಿರುವುದು ಮಾಲೀಕ ರಾಜೇಶ್ (43) ಅವರ ಗಮನಕ್ಕೆ ಬಂದಿದೆ. ತಕ್ಷಣ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಬ್ಬರು ಕಳ್ಳರ ಕೈಚಳಕ ಬಯಲಾಗಿದೆ. ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


