ಬೆಳ್ತಂಗಡಿ : ವ್ಯಕ್ತಿಯೊಬ್ಬರು ನೇತ್ರಾವತಿ ಸೇತುವೆಯ ಮೇಲಿನಿಂದ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಈ ವೇಳೆ ಸ್ಥಳೀಯರು ನೀರಿಗೆ ಹಾರಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಲಕ್ವಾಲ್ಲಿ ಮೂಲದ ಮಂಜು(52) ಆತ್ಮಹತ್ಯೆಗೆ ಯತ್ನಿಸಿದವರು.
ಮಂಜು ಪತ್ನಿ ಮತ್ತು ಮಕ್ಕಳು ಹತ್ತು ದಿನದ ಹಿಂದೆ ಮನೆಯಲ್ಲಿ ಗಲಾಟೆ ಮಾಡಿ ಮನೆ ಬಿಟ್ಟು ಹೋಗಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದು ಧರ್ಮಸ್ಥಳದ ಕನ್ಯಾಡಿಯಲ್ಲಿ ಕೂಲಿ ಕೆಲಸಕ್ಕೆ ಸೇರಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿಂದ ನೇರ ನೇತ್ರಾವತಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದು ಅದರಂತೆ ಜ.24 ರಂದು ಸಂಜೆ ನೇತ್ರಾವತಿ ಸೇತುವೆ ಮೇಲೆ ಬಂದು ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ನೀರಿಗೆ ಹಾರಿದ ಪರಿಣಾಮ ಮಂಜು ಅವರ ಕೈ ,ಕಾಲಿಗೆ ಗಾಯವಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಸೇರಿ 108 ಆಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
