ಬೆಂಗಳೂರು: ಅಟೋ, ಕ್ಯಾಬ್, ಅರೆ ಸರಕು ಸಾಗಣೆ ಚಾಲಕರಿಗೆ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಆಮ್ ಆದ್ಮಿ ಪಕ್ಷ ಕರ್ನಾಟಕದ ರಾಜ್ಯ ಆಟೋ ಘಟಕದಿಂದ ಇಂದು ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಮೇ 3ನೇ ತಾರೀಕಿನ ಒಳಗೆ 5 ಸಾವಿರ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದರು ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕರು ತಿಳಿಸಿದ್ದಾರೆ.
ಬೆಂಗಳೂರು ನಗರ ಒಂದರಲ್ಲೇ ಸುಮಾರು 1.5 ಲಕ್ಷದಷ್ಟು ಆಟೋ ಚಾಲಕರು, 1 ಲಕ್ಷದಷ್ಟು ಆಟೋ ಮೆಕ್ಯಾನಿಕ್‌ಗಳು, 85 ಸಾವಿರದಷ್ಟು ಕ್ಯಾಬ್ ಚಾಲಕರಿದ್ದಾರೆ. ಇವರಲ್ಲಿ ಹೆಚ್ಚಿನವರು ಬ್ಯಾಂಕ್‌ನಿಂದ ವಾಹನ ಸಾಲ, ಖಾಸಗಿ ಲೇವಾದೇವಿಗಾರರಿಂದ, ಫೈನಾನ್ಸ್‌ಗಳಿಂದ ಹಣ ಪಡೆದು ತಿಂಗಳ, ತಿಂಗಳ ಕಂತುಗಳಲ್ಲಿ ಹಣವನ್ನು ಕಟ್ಟುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದವರು, ಅಂದಂದಿನ ದುಡಿಮೆಯನ್ನೇ ನಂಬಿಕೊಂಡವರು ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾಗಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ದೆಹಲಿ ಸರಕಾರ ಈಗಾಗಲೇ ಆಟೋ, ಟ್ಯಾಕ್ಸಿ ಚಾಲಕರಿಗೆ ₹5,000 ರುಪಾಯಿಗಳ ಸಹಾಯ ನಿಧಿಯನ್ನು ನೀಡಿದೆ. ಈ ಆರ್ಥಿಕ ನೆರವಿನ ಲಾಭ ಗ್ರಾಮೀಣ್ ಸೇವಾ, ಇ-ರಿಕ್ಷಾಗಳು, ಕ್ಯಾಬ್, ಶಾಲಾ ವಾಹನಗಳು ಮೊದಲಾದ ಅರೆ ಸಾಗಣೆ ವಾಹನಗಳ ಚಾಲಕರಿಗೆ ನೀಡಲಾಗಿದೆ ಇದೇ ಯೋಜನೆಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ಬೇಡಿಕೆ ಇಡಲಾಯಿತು.