ಮಂಗಳೂರು: ಕಡಿಮೆ ದರದಲ್ಲಿ ಮರಳು ದೊರೆಯಲು ಹಾಗೂ ಮರಳುಗಾರಿಕೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ರಾಜ್ಯ ಸರ್ಕಾರವು ಹೊಸ ಮರಳು ನೀತಿ ಜಾರಿಗೊಳಿಸಲು ನಿರ್ಧರಿಸಿದೆ.
ಕರಾವಳಿ ಪ್ರದೇಶದ ಸಾಂಪ್ರದಾಯಿಕ ಮರಳುಗಾರಿಕೆಗೆ ಸೋಮವಾರದಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುಮತಿ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಗ್ರಾಮೀಣ ವಸತಿ ಯೋಜನೆಗಳಿಗೆ ಮತ್ತು ಗ್ರಾಮೀಣ ಜನರು ಮನೆ ಕಟ್ಟಿಕೊಳ್ಳಲು ರಿಯಾಯ್ತಿ ದರದಲ್ಲಿ ಮರಳು ಪೂರೈಕೆ ಮಾಡಲು ನೀತಿಯಲ್ಲಿ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಸ್ಥಳೀಯರು ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಈ ರೀತಿಯಲ್ಲಿ ಮರಳು ತೆಗೆಯಬಹುದಾಗಿದೆ. ಪರಿಸರಕ್ಕೆ ಹಾನಿಯಾಗುವಂತೆ ಮರಳು ತೆಗೆಯುವುದಕ್ಕೆ ಅವಕಾಶವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಗ್ರಾ.ಪಂ. ವ್ಯಾಪ್ತಿಯ ಮರಳು, ಗಣಿಗಾರಿಕೆಗೆ ಆಯಾ ಗ್ರಾ.ಪಂ.ಗಳಿಗೆ ಅಧಿಕಾರ, ಹಸಿರು ನ್ಯಾಯಾಧೀಕರಣದ ನಿಯಮಾವಳಿಗಳನ್ನು ಅಳವಡಿಸಿಕೊಂಡು ಮರಳು ನೀತಿ ಜಾರಿ, ಮರಳು ತೆಗೆಯಲು ಸಂಬಂಧಿತ ಪ್ರಾಧಿಕಾರಗಳಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂಬ ನಿಯಮಗಳನ್ನು ಪಾಲಿಸಬೇಕಿದೆ. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ನಡೆಯುವ ನದಿ ಬದಿಯ ಸಾಂಪ್ರದಾಯಿಕ ಮಾನವಾಧಾರಿತ ಮುಳುಗು ಮರಳು ತೆಗೆಯುವ ಪದ್ಧತಿಗೆ ರಿಯಾಯಿತಿ ನೀಡಲಾಗಿದೆ. ಆದರೆ ಯಾವುದೇ ಯಂತ್ರೋಪಕರಣ ಬಳಸದೆ ಸಾಂಪ್ರದಾಯಿಕ ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ . ಗ್ರಾ.ಪಂ. ಅನುಮತಿ ಪಡೆದು ಮರಳು ಮಾರಬಹುದಾಗಿದೆ.