Saturday, May 18, 2024
Homeತಾಜಾ ಸುದ್ದಿಇಂದು ಸೋನಿಯಾ ಗಾಂಧಿ ವಿಚಾರಣೆ: ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ಇಂದು ಸೋನಿಯಾ ಗಾಂಧಿ ವಿಚಾರಣೆ: ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

spot_img
- Advertisement -
- Advertisement -

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ವಿಚಾರಣೆಗೆ ಒಳಪಡಿಸಲಿದೆ. ಇದೇ ಸಂದರ್ಭದಲ್ಲಿ ಇ.ಡಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಮತ್ತೆ ಬೃಹತ್ ಪ್ರತಿಭಟನೆಗಳನ್ನು ನಡೆಸಲು ಸಿದ್ಧತೆ ನಡೆಸಿದೆ.

ಸೋನಿಯಾ ಗಾಂಧಿ ಅವರ ವಿಚಾರಣೆ ಕಳೆದ ತಿಂಗಳು ನಡೆಯಬೇಕಿತ್ತು. ಆದರೆ ಅವರಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದು, ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ ನಂತರ ಶ್ವಾಸನಾಳ ಸೋಂಕು ಉಂಟಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದರು. ಇದರಿಂದ ಇ.ಡಿ ಹಲವು ಬಾರಿ ವಿಚಾರಣೆಯನ್ನು ಮುಂದೂಡಿತ್ತು. ಜೂನ್ ಮಧ್ಯ ಭಾಗದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಸೋನಿಯಾ ಅವರು, ವಿಚಾರಣೆಗೆ ಹಾಜರಾಗಲು ಇನ್ನಷ್ಟು ಕಾಲಾವಕಾಶ ಕೇಳಿದ್ದರು.

ಕಾಂಗ್ರೆಸ್ ನಾಯಕರು ಬುಧವಾರ ಸಂಜೆ ಸಭೆ ನಡೆಸಿದ್ದು, ಪ್ರತಿಭಟನೆಯ ಸ್ವರೂಪಗಳ ಬಗ್ಗೆ ಅಂತಿಮ ಚರ್ಚೆ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಬೆಳಿಗ್ಗೆ 11 ಗಂಟೆಗೆ ಇ.ಡಿ ಕಚೇರಿ ಕಡೆ ತೆರಳಲಿದ್ದು, ಈ ವೇಳೆ ಎಐಸಿಸಿ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಘಟಕಗಳ ಸದಸ್ಯರು ಅವರಿಗೆ ಬೆಂಬಲ ನೀಡುವ ಧ್ಯೋತಕವಾಗಿ ಜೊತೆಗೆ ಹೋಗಲಿದ್ದಾರೆ.

ಸಂಸತ್ ಕಲಾಪ ಮುಂದೂಡಿದ ಬಳಿಕ ಪಕ್ಷದ ಸಂಸದರು ಕೂಡ ಪ್ರತಿಭಟನೆಗೆ ಸೇರಿಕೊಳ್ಳಲಿದ್ದಾರೆ. ರಾಜ್ಯ ಘಟಕಗಳು ಆಯಾ ರಾಜ್ಯಗಳ ರಾಜಧಾನಿಯಲ್ಲಿ ಪ್ರತಿಭಟನೆಗಳನ್ನು ನಡೆಸಲಿವೆ.

“ಮೋದಿ- ಶಾ ಜೋಡಿಯು ನಮ್ಮ ಉನ್ನತ ನಾಯಕತ್ವದ ವಿರುದ್ಧ ಆರಂಭಿಸಿರುವ ರಾಜಕೀಯ ಹಗೆತನ ನಾಳೆ (ಗುರುವಾರ) ಮುಂದುವರಿಯಲಿದ್ದು, ಸೋನಿಯಾ ಗಾಂಧಿ ಅವರ ಜತೆಗೆ ಒಗ್ಗಟ್ಟಿನಿಂದ ಇದ್ದೇವೆ ಎಂಬುದನ್ನು ಪರಿಣಾಮಕಾರಿ ರೀತಿಯಲ್ಲಿ ಹೇಳಲು ಇಡೀ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಪ್ರದರ್ಶನಗಳನ್ನು ನಡೆಸಲಿದೆ” ಎಂದು ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್ ಬುಧವಾರ ಹೇಳಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಐದು ದಿನ ವಿಚಾರಣೆಗೆ ಒಳಪಡಿಸಿತ್ತು. ಈ ಐದೂ ದಿನವೂ ಕಾಂಗ್ರೆಸ್ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿತ್ತು. ರಾಜ್ಯಗಳ ಇ.ಡಿ ಕಚೇರಿಗಳ ಮುಂದೆ ಪಕ್ಷದ ನಾಯಕರು ಮೆರವಣಿಗೆ, ಧರಣಿ, ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ನಡೆಸಿದ್ದರು. ಪ್ರತಿ ದಿನವೂ ಅನೇಕ ನಾಯಕರು, ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿತ್ತು. ಕೆಲವು ಕಡೆ ಸಂಘರ್ಷಗಳು ನಡೆದು, ಹಲವರಿಗೆ ಗಾಯಗಳಾಗಿತ್ತು. ರಾಹುಲ್ ಅವರ ವಿಚಾರಣೆಯ ಕೊನೆಯ ದಿನ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆದಿತ್ತು.

ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಬನ್ಸಾಲ್ ಅವರನ್ನು ಕೂಡ ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಡೆಸುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಕಾಂಗ್ರೆಸ್ ಒಡೆತನದ ಯಂಗ್ ಇಂಡಿಯಾ ಕಂಪೆನಿ ತನ್ನ ವಶಕ್ಕೆ ಪಡೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಗಾಂಧಿ ಕುಟುಂಬದ ಪಾತ್ರದ ಕುರಿತು ಇ.ಡಿ ವಿಚಾರಣೆ ನಡೆಸುತ್ತಿದೆ.

- Advertisement -
spot_img

Latest News

error: Content is protected !!