ಉಡುಪಿಯ ಬ್ರಹ್ಮಾವರ ತಾಲೂಕಿನ ಗಾಂಧಿನಗರದಲ್ಲಿ ಭಾನುವಾರ ರಾತ್ರಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕ್ಷುಲ್ಲಕ ಜಗಳದ ಹಿನ್ನೆಲೆಯಲ್ಲಿ ಮಗನೇ ತನ್ನ ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಮೃತರನ್ನು ಲಾರಿ ಚಾಲಕರಾಗಿದ್ದ ಮೆಹಬೂಬ್ ಅಲಿ ಹಾಗೂ ಅವರ ಪತ್ನಿ ಶಂಶಾದ್ ಬೇಗಂ ಎಂದು ಗುರುತಿಸಲಾಗಿದೆ. ಫುಡ್ ಡೆಲಿವರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷದ ಮಗ ಶಾಹಿದ್ ಅಲಿ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಘಟನೆಯ ವಿವರಗಳ ಪ್ರಕಾರ, ಭಾನುವಾರ ರಾತ್ರಿ ಮನೆಯಲ್ಲಿ ಸಣ್ಣ ವಿಚಾರಕ್ಕೆ ತಂದೆ-ತಾಯಿಯೊಂದಿಗೆ ಗಲಾಟೆ ಮಾಡಿಕೊಂಡ ಶಾಹಿದ್, ಕೋಪದ ರಭಸದಲ್ಲಿ ಸುತ್ತಿಗೆಯಿಂದ ಇಬ್ಬರ ಮೇಲೂ ಭೀಕರವಾಗಿ ದಾಳಿ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕೊಲೆ ಮಾಡಿದ ನಂತರ ಆರೋಪಿ ಶಾಹಿದ್ ತಾನೇ ಖುದ್ದಾಗಿ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬ್ರಹ್ಮಾವರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಹತ್ಯೆಗೆ ನಿಜವಾದ ಕಾರಣವೇನು ಎಂಬುದರ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ.


