ಧರ್ಮಸ್ಥಳ: ರಾಜ್ಯದಾದ್ಯಂತ ಬಂದ್ ಇರುವ ಸಂದರ್ಭದಲ್ಲಿಯೂ ತಮ್ಮ ಕರ್ತವ್ಯ ಮರೆಯದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಒಂದೇ ದಿನ ರಾಜ್ಯದ ವಿವಿದೆಡೆಗಳಲ್ಲಿ 8,714 ಕಡು ಬಡವರಿಗೆ ರೂ. 68.1 ಲಕ್ಷ ರೂ ಮಾಸಾಶನವನ್ನು ವಿತರಿಸಿದ್ದಾರೆ.
ಗ್ರಾಮಾಭಿವೃದ್ಧಿ ಯೋಜನೆಯು ಕಡು ಬಡವರಿಗೆ ಮಾಸಾಶನ ಯೋಜನೆ ಹಮ್ಮಿಕೊಂಡಿದ್ದು, ಪ್ರತಿ ತಿಂಗಳೂ
ಈ ಹಣವನ್ನು ಯೋಜನೆಯ ನಗದು ಕೇಂದ್ರಗಳಲ್ಲಿ ವಿತರಿಸಲಾಗುತ್ತದೆ. ಇದೀಗ ಕರೋನ ಬಂದ್ ನಿಂದಾಗಿ
ಈ ಯೋಜನೆಯ ಫಲಾನುಭವಿಗಳಿಗೆ ತೊಂದರೆಯಾಗದಂತೆ ಕೇಂದ್ರ ಕಚೇರಿಯಿಂದ ಕಾರ್ಯಕರ್ತರ
ಖಾತೆಗಳಿಗೆ ಹಣ ಜಮೆ ಮಾಡಿ, ಇದನ್ನು ಆಯಾ ಎಟಿಎಂಗಳಲ್ಲಿ ನಗದು ಮಾಡಿ, ಕೇವಲ ಒಂದು ದಿನದಲ್ಲಿ
ರಾಜ್ಯದ 4315 ಗ್ರಾಮಗಳಲ್ಲಿ 8714 ಫಲಾನುಭವಿಗಳಿಗೆ ಹಂಚಿ ಒಂದು ದಾಖಲೆಯನ್ನೇ ನಿರ್ಮಿಸಿದೆ.
ಇದರಿಂದ ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರದಿದ್ದ, ಆರೋಗ್ಯ ಸಮಸ್ಯೆಗಳುಳ್ಳ, ದುಡಿಯಲು
ಅಸಮರ್ಥರಾಗಿರುವ, ಬಡ ಕುಟುಂಬಗಳಿಗೆ ಅನುಕೂಲವಾಗಿದೆ.
ಕಾರ್ಯ ನಿರ್ವಹಿಸುತ್ತಿರುವ ಯಂತ್ರಧಾರೆ ಕೇಂದ್ರಗಳು :
ರಾಜ್ಯದ ರೈತರ ಕೃಷಿ ಕೆಲಸಗಳು ಸಾಂಗವಾಗಿ ನಡೆಸಲು ಅನುಕೂಲವಾಗುವಂತೆ ಧರ್ಮಸ್ಥಳ ಯೋಜನೆಯು
ತನ್ನ ಎಲ್ಲಾ ರೈತ ಯಂತ್ರೋಪಕರಣ ಬಾಡಿಗೆ ಕೇಂದ್ರ, ‘ಯಂತ್ರಧಾರೆ’ ಕೇಂದ್ರಗಳನ್ನು ಪ್ರತಿದಿನ ವ್ಯವಸ್ಥಿತವಾಗಿ
ನಡೆಸಿದೆ. ಕರೋನ ಬಂದ್ ಅವಧಿಯಲ್ಲಿ ಸರಕಾರದಿಂದ ವಿಶೇಷ ಅನುಮತಿಗಳನ್ನು ಪಡೆದಕೊಂಡು
ಯೋಜನೆಯು ನಡೆಸುತ್ತಿರುವ 164 ಕೇಂದ್ರಗಳ ಪೈಕಿ, 158 ಕೇಂದ್ರಗಳು ರೈತರಿಗೆ ಯಂತ್ರಗಳನ್ನು
ಪೂರೈಸುತ್ತಿವೆ.
ಯೋಜನೆಯ ಕಾರ್ಯಕರ್ತರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಳೆದ 5
ವರ್ಷಗಳಿಂದ ರಾಜ್ಯದ ರೈತರಿಗೆ ಸೇವೆ ನೀಡುತ್ತಿರುವ ಈ ಕೇಂದ್ರಗಳು ಕರೋನಾ ಭೀತಿ ಇದ್ದರೂ
ಜನಸೇವೆಯಲ್ಲಿ ತೊಡಗಿಕೊಂಡಿರುವುದು ರೈತರ ಮೆಚ್ಚುಗೆ ಗಳಿಸಿದೆ.
ಜೂನ್ 30 ರವರೆಗೆ ಸಂಘ ಸದಸ್ಯರು ಸಾಲದ ಕಂತು ಕಟ್ಟಬೇಕಿಲ್ಲ :
ಕರೋನಾ ಭೀತಿಯಲ್ಲಿ ವ್ಯವಹಾರಗಳು ಸ್ಥಗಿತಗೊಂಡಿರುವ ಸಮಯದಲ್ಲಿ ಯೋಜನೆಯಿಂದ ಪ್ರಾಯೋಜಿತ
ಸ್ವಸಹಾಯ ಸಂಘಗಳ ಸದಸ್ಯರು ಪಡಕೊಂಡಿರುವ ಸಾಲಗಳ ಕಂತುಗಳನ್ನು ಕಟ್ಟದಿದ್ದರೂ, ಅದನ್ನು ಕಂತು
ಬಾಕಿ ಎಂದು ಪರಿಗಣಿಸಲಾಗುವುದಿಲ್ಲವೆಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ
ಡಾ| ಎಲ್. ಎಚ್ .ಮಂಜುನಾಥ್ ತಿಳಿಸಿದ್ದಾರೆ. ಲಾಕ್‌ಡೌನ್ ರದ್ದು ಮಾಡುವ ಸರಕಾರದ ನಿರ್ಧಾರದ
ಬಳಿಕ, ಸಂಘದ ವಾರದ ಸಭೆಗಳನ್ನು ನಡೆಸಲಾಗುವುದು ಮತ್ತು ಅಗತ್ಯವಿದ್ದವರಿಗೆ ತುರ್ತು ಸಾಲದ ನೆರವನ್ನು
ಒದಗಿಸಲಾಗುವುದು. ಮರುಪಾವತಿ ಮಾಡುವ ಸಾಮರ್ಥ್ಯ ಇದ್ದವರು ಮರುಪಾವತಿ ಪ್ರಾರಂಭಿಸಬಹುದು.
ಇಲ್ಲದಿದ್ದವರಿಗೆ ಜೂನ್ ೩೦ರವರಿಗೂ ಮರುಪಾವತಿ ವಿನಾಯಿತಿ ನೀಡಲಾಗಿದೆ.
ಯೋಜನೆಯ ಕಾರ್ಯಕರ್ತರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಯಾವುದೇ ಸೇವೆಗೂ
ಸಿದ್ದರಾಗಿದ್ದರೆಂದು, ಸ್ವಸಹಾಯ ಸಂಘಗಳ ಸದಸ್ಯರು ಶಿಸ್ತು ಕಾಪಾಡುತ್ತಿದ್ದಾರೆಂದು
ಎಲ್. ಎಚ್. ಮಂಜುನಾಥ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.