ಬೆಳಗಾವಿ: ಲಾಕ್ ಡೌನ್ ಹೇರಿರುವ ನಂತರ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಅಶ್ವಿನಿ ಹಲಗೇಕರ್ ಎಂಬ ಮಹಿಳೆಯ ಕುಟುಂಬದ ಜೀವನ ದುಸ್ಥಿರವಾಗಿದೆ. ಇವರ 23 ವರ್ಷದ ಮಗ ಹುಟ್ಟಿನಿಂದಲೇ ಅಂಗವಿಕಲನಾಗಿ ಹಾಸಿಗೆಯಲ್ಲೇ ಜೀವನ ಸಾಗಿಸುತ್ತಿದ್ದಾನೆ. ಇನ್ನೊಬ್ಬ ಮಗ ಗ್ಶಾರೇಜ್ ಕೆಲಸಕ್ಕೆ ಹೋಗುತ್ತಿದ್ದಾನೆ. ಇವನಿಂದಲೆ ಜೀವನ ನಿರ್ವಹಣೆ ಆಗಬೇಕಾಗಿದೆ. ಆಶ್ವಿನಿಯವರು ಮಗನ ಆರೈಕೆ ಮಾಡಿ ಕೂಲಿ ಕೆಲಸ ಮಾಡುತ್ತಿದ್ದಾರೆ.
ಆದರೆ ಕೊರೋನಾ ಲಾಕ್ ಡೌನ್ ಆದ ನಂತರ ಆದಾಯದ ಮೂಲವಾಗಿದ್ದ ಕೆಲಸವೇ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಮಗನಿಗೆ ಅಂಗವಿಕಲ ಹಾಗೂ ಪೀಡ್ಸ್ ಖಾಯಿಲೆ ಇದ್ದು ನಿತ್ಯ ಔಷಧಿಗೂ ಬೇರೆಯವರ ಸಹಾಯ ಎದುರು ನೋಡುವಂತಾಗಿತ್ತು. ಈ ಎಲ್ಲ ವಿಷಯಗಳ ಬಗ್ಗೆ ಕೆಲ ದಿನಗಳ ಹಿಂದೆ ರಾಜ್ಯದ ದೃಶ್ಯ ಮಾಧ್ಯಮವೊಂದರಲ್ಲಿ ವಿಸ್ತೃತವಾದ ವರದಿ ಪ್ರಕವಾಗಿತ್ತು.
ಈ ಸುದ್ದಿಯನ್ನು ಗಮನಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಥಳೀಯ ಯೋಜನಾಧಿಕಾರಿ ಹಾಗೂ ಮೇಲ್ವಿಚಾರಕರು ಆ ಭಾಗದ ಸೇವಾಪ್ರತಿನಿಧಿ ಖುದ್ದು ಅಶ್ವಿನಿ ಹಲಗೇಕರ್ ರವರ ಮನೆಗೆ ತೆರಳಿ ಸಹಾಯ ಹಸ್ತ ಚಾಚಿದ್ದಾರೆ.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಣಾಧಿಕಾರಿಯವರ ಸಲಹೆಯಂತೆ ತುರ್ತಾಗಿ ಔಷದಿ ಹಾಗೂ ಜೀವನ ನಿರ್ವಹಣೆಗೆ ರೂ 5000 ಸಹಾಯಧನ ಮಂಜೂರು ಮಾಡಿದ್ದಾರೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಲ್ಲದ ಕುಟುಂಬಕ್ಕೆ ಕಷ್ಟ ಕಾಲದಲ್ಲಿ ನೆರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರಿಗೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಪದಾಧಿಕಾರಿಗಳಿಗೆ ಅಶ್ವಿನಿ ಹಲಗೇಕರ್ ಕುಟುಂಬ ಧನ್ಯವಾದ ತಿಳಿಸಿದೆ.