ಶಿಶಿಲ: ಕೊರೋನಾ ಲಾಕ್‌ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಮತ್ಸ್ಯ ಕ್ಷೇತ್ರ ಶಿಶಿಲೇಶ್ವರ ದೇವಾಲಯದ ಪಕ್ಕ ಹರಿಯುವ ಪುಣ್ಯನದಿ ಕಪಿಲಾ ನದಿ ಮತ್ತು ಅದರ ದಡದ ಸ್ವಚ್ಛತಾ ಅಭಿಯಾನ ಇಂದು ಶಿಶಿಲ ಗ್ರಾಮಸ್ಥರ ಸಹಕಾರದಿಂದ ನಡೆಯಿತು. ನದಿಯಲ್ಲಿ ಎಸೆಯಲಾಗಿದ್ದ ಬಟ್ಟೆಬರೆ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ತೆರವುಗೊಳಿಸುವಲ್ಲಿ ತೊಡಗಿಸಿಕೊಂಡರು.

ಪ್ರತೀ ವರ್ಷ ಮಳೆಗಾಲದಲ್ಲಿ ಶಿಶಿಲೇಶ್ವರನ ಸನ್ನಿಧಿಯ ಪಕ್ಕದಲ್ಲಿ ಸಣ್ಣ ನೀರಾವರಿ ಯೋಜನೆಯವರು ನಿರ್ಮಿಸಿದ ಕಿಂಡಿ ಅಣೆಕಟ್ಟಿಗೆ ಹೊಳೆಯಲ್ಲಿ ಪ್ರವಾಹ ಬಂದಂತಹ ಸಮಯದಲ್ಲಿ ಮೇಲಿನಿಂದ ಬುಡ ಸಹಿತ ಕಿತ್ತು ಬಂದಂತಹ ಮರಗಳು ಸಿಕ್ಕಿ ಹಾಕಿಕೊಂಡು ಶಿಶಿಲೇಶ್ವರ ದೇವಸ್ಥಾನವು ಸಂಪೂರ್ಣವಾಗಿ ಜಲಾವೃತವಾಗುತ್ತಿದ್ದು ಮತ್ತು ಹೊಳೆಯು ತನ್ನ ಪಾತ್ರವನ್ನೇ ಹಿರಿದಾಗಿಸುತ್ತಾ ಹೋಗುತ್ತಿದೆ

ಈ ಸಮಸ್ಯೆಯನ್ನು ಮನಗೊಂಡಂತಹ ಗ್ರಾಮಸ್ಥರು ಪ್ರಾಯೋಗಿಕವಾಗಿ ಮಳೆಗಾಲ ಪ್ರಾರಂಭವಾಗುವ ಮುಂಚೆಯೇ ನದಿಯಲ್ಲಿ ಬಂದಿರುವ ಒಣಗಿದ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯವರ ಸಹಯೋಗ ಮತ್ತು ಮಾರ್ಗದರ್ಶನದೊಂದಿಗೆ ,ಶಿಶಿಲೇಶ್ವರ ಭಕ್ತ ವೃಂದ,ಯುವಕ ಮಂಡಲ ಮುಂತಾದವರ ಸಹಾಯದಿಂದ ಸುಮಾರು 80 ಮಂದಿ ಸೇರಿಕೊಂಡು ಶಿಶಿಲ ದೇವಸ್ಥಾನದಿಂದ ಮೇಲೆ ಸುಮಾರು 8 ಕಿಲೋಮೀಟರ್ಗಳಷ್ಟು ದೂರವಿರುವ ಚಿಕ್ಕಮಗಳೂರು ಅರಣ್ಯ ಪ್ರದೇಶದ ಗಡಿಭಾಗದಲ್ಲಿರುವ ಹೊಳೆಗಂಡಿ ಎಂಬಲ್ಲಿಂದ ಪ್ರಾರಂಭಿಸಿ ಶಿಶಿಲ ದೇವಸ್ಥಾನದವರೆಗೆ ಹೊಳೆಯಲ್ಲಿ ಒಣಗಿ ಬಿದ್ದಿರುವಂತಹ ಸುಮಾರು ೧೦೦ ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿಸಿದ್ದಾರೆ

ಇದರೊಂದಿಗೆ ಜೀವನದಿ ಕಪಿಲೆಯ ಒಡಲೊಳಗಿಂದ ವಿಕೃತ ಮನಸ್ಸಿನ ಕುಡುಕರು ಬಿಸಾಡಿದಂತಹ ಸುಮಾರು ೧೦ ಚೀಲಗಳಷ್ಟು ಮದ್ಯದ ಬಾಟಲಿಗಳನ್ನು ಮತ್ತು ಪ್ಲಾಸ್ಟಿಕ್ಗಳನ್ನು ಸಂಗ್ರಹಿಸಿ ಕಪಿಲಾ ನದಿ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಅರಣ್ಯಾಧಿಕಾರಿ ಪ್ರಶಾಂತ್,ಅರಣ್ಯ ರಕ್ಷಕರಾದ ನಾಗಲಿಂಗ,ಸುನಿಲ್,ನಾಗಪ್ಪ ಇವರು ಮಾರ್ಗದರ್ಶನ ನೀಡಿ ಬಂದಂತಹ ಗ್ರಾಮಸ್ತರ ಸಹಕಾರಕ್ಕಾಗಿ ಕೃತಜ್ನತೆ ಸಲ್ಲಿಸಿ,ಪ್ರತಿಯೊಬ್ಬರು ಕೂಡ ಮಾಸ್ಕ್ ಗಳನ್ನು ಧರಿಸಿ ಸಾಮಾಜಿಕ ಅಂತರವನ್ನುಕಾಪಾಡಿ ಕೆಲಸ ನಿರ್ವಹಿಸುವಂತೆ ಕೋರಿದರು. ಶಿಶಿಲ ಪಂಚಾಯತ್ ವತಿಯಿಂದ ಮಾಸ್ಕ್ ಗಳನ್ನು ಪೂರೈಸಿ ಸಹಕರಿಸಿದ್ದಾರೆ.

ಶಾಸಕ ಹರೀಶ್ ಪೂಂಜ ಸಾಥ್
ಈ ವಿಚಾರವನ್ನು ಮನಗಂಡ ಬೆಳ್ತಂಗಡಿ ಶಾಸಕ ಮಾನ್ಯ ಹರೀಶ್ ಪೂಂಜರವರು ಸ್ಥಳಕ್ಕಾಗಮಿಸಿ ಗ್ರಾಮಸ್ಥರು ಮಾಡಿದಂತಹ ಕೆಲಸವನ್ನು ಶ್ಲಾಘಿಸಿ, ಶುಭಹಾರೈಸಿ,ತಾಲೂಕಿಗೆ ಮಾದರಿಯಾಗುವಂತಹ ಕೆಲಸವನ್ನ ಮಾಡಿದ್ದೀರಿ ಎಂದು ಅಭಿನಂದಿಸಿದ್ದಾರೆ. ಇದರೊಂದಿಗೆ ಶಿಶಿಲೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಕಿಂಡಿ ಅಣೆಕಟ್ಟಿನ ಸ್ಥಳವನ್ನು ಪರಿಶೀಲಿಸಿ ಮಳೆಗಾಲದ ಸಿಧ್ಧತೆಗಾಗಿ ಹಿಟಾಚಿ ಮಿಷನ್ ತಂದು ನಿಲ್ಲಿಸುವ ಭರವಸೆಯನ್ನು ನೀಡಿದ್ದಾರೆ.

ಈ ಎಲ್ಲಾ ಕೆಲಸಗಳಲ್ಲಿ ಭಾಗವಹಿಸಿದ ಸ್ಥಳೀಯರಾದ ಯುವ ಬ್ರಿಗೇಡ್ ಇದರ ವಿಭಾಗ ಮುಖ್ಯಸ್ಥರಾದ ತಿಲಕ್ ಇವರು ಲಾಕ್ಡೌನ್ ಸಮಯದಲ್ಲಿ ಪ್ರಕೃತಿ ಮಾತೆಗೆ ಸೇವೆ ಸಲ್ಲಿಸಿ ,ಸ್ವಚ್ಛತಾ ಅಭಿಯಾನದ ಮೂಲಕ ಶಿಶಿಲೇಶ್ವರ ದೇವರ ಸೇವೆಗೂ ಅವಕಾಶ ಮಾಡಿಕೊಟ್ಟ ಸಂಘಟಕರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.


