ಬಂಟ್ವಾಳ: ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಸಂಸ್ಥೆಯ ಟ್ರಸ್ಟಿ ಅರ್ಜುನ್ ಪೂಂಜಾ ವಿನ್ಯಾಸಗೊಳಿಸಿದ ಸ್ಯಾನಿಟೈಸರ್ ಉಪಕರಣವನ್ನು (ನಿರ್ಮಲೀಕಾರಕ ಉಪಕರಣ) ತಾಲೂಕಿನ ಸರಕಾರಿ ಕಚೇರಿಗಳಿಗೆ ಇಂದು ಹಸ್ತಾಂತರಿಸಲಾಯಿತು.
ಬಂಟ್ವಾಳ ಮಿನಿ ವಿಧಾನಸೌಧ, ಪುರಸಭೆ ಕಚೇರಿ, ತಾಲೂಕು ಸರಕಾರಿ ಆಸ್ಪತ್ರೆ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಕಚೇರಿ, ಬಂಟ್ವಾಳ ನಗರ ಪೊಲೀಸ್ ಠಾಣೆ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಸ್ಯಾನಿಟೈಸರ್ ಉಪಕರಣವನ್ನು ಉಚಿತವಾಗಿ ನೀಡಲಾಯಿತು. ಜನರು ಕೈಯಿಂದ ಯಂತ್ರವನ್ನು ಮುಟ್ಟದೆಯೇ ಸ್ಯಾನಿಟೈಸರ್ ಪಡೆಯಬಹುದಾಗಿದ್ದು ಇಲಾಖೆಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.
ಕಳೆದ ಹತ್ತು ದಿನಗಳ ಹಿಂದೆಯೇ ಅರ್ಜುನ್ ಪೂಂಜಾ ಅವರು ಕೈಯಿಂದ ಮುಟ್ಟದೆಯೇ ಸರಳವಾಗಿ ಸ್ಯಾನಿಟೈಸರ್ ಪಡೆಯುವ ಯಂತ್ರವನ್ನು ಆವಿಷ್ಕರಿಸಿದ್ದು ಮೊದಲ ಯಂತ್ರವನ್ನು ಫರಂಗಿಪೇಟೆಯ ಬಸ್ಸು ನಿಲ್ದಾಣದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಉಚಿತವಾಗಿ ಅಳವಡಿಸಲಾಗಿತ್ತು.
ಆ ಬಳಿಕ ಇತರ ಸರಕಾರಿ ಕಚೇರಿಗಳಿಗೂ ಈ ಯಂತ್ರವನ್ನು ಅಳವಡಿಸಲಾಗಿತ್ತು. ಇದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ರಾಜ್ಯದ್ಯಂತ ಯಂತ್ರಕ್ಕೆ ಸಾಕಷ್ಟು ಬೇಡಿಕೆಗಳು ವ್ಯಕ್ತವಾಗಿದೆ. ಇದೀಗ ಬಂಟ್ವಾಳದ ಪ್ರಮುಖ 6 ಸರಕಾರಿ ಕಚೇರಿಗಳಿಗೆ ಉಚಿತವಾಗಿ ನೀಡಲಾಯಿತು. ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್., ಪುರಸಭೆಯಲ್ಲಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಸೈ ಅವಿನಾಶ್, ಗ್ರಾಮಾಂತರ ಠಾಣೆಯಲ್ಲಿ ಎಸೈ ಪ್ರಸನ್ನ, ಡಿವೈಎಸ್ಪಿ ಕಚೇರಿಯಲ್ಲಿ ಎಎಸೈ ಸಂಜೀವ ಹಾಗೂ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಸ್ವೀಕರಿಸಿದರು.
ಪ್ರೊಬೇಷನರಿ ಎಎಸ್ಪಿ ರಂಜಿತ್ ಅವರು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಇಂತಹ ಸ್ಯಾನಿಟೈಸರ್ ಯಂತ್ರ ಅಳವಡಿಸಿದರೆ ಉತ್ತಮ ಎನ್ನುವ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಟ್ರಸ್ಟಿಗಳಾದ ರೊ. ಪ್ರಕಾಶ್ ಕಾರಂತ್, ಅರ್ಜುನ್ ಪೂಂಜಾ, ಸದಸ್ಯರಾದ ಸುಕೇಶ್ ಶೆಟ್ಟಿ ತೇವು, ವಿಕ್ರಮ್ ಬರ್ಕೆ, ದಿನೇಶ್ ತುಂಬೆ ಹಾಜರಿದ್ದರು.