ಮಣಿಪಾಲ: ಅನಾಮಧೇಯ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಆ್ಯಪ್ ಡೌನ್‌ಲೋಡ್ ಮಾಡುವಂತೆ ತಿಳಿಸಿ ಮಹಿಳೆಯ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಎಗರಿಸಿದ ಘಟನೆ ನಡೆದಿದೆ.
ಘಟನೆಯ ವಿವರ: ಜು. 1ರಂದು ಮಣಿಪಾಲದ ಮಹಿಳೆಯೊಬ್ಬರು ಝೊಮ್ಯಾಟೋ ಆ್ಯಪ್‌ನಲ್ಲಿ ಬೆಳಗ್ಗಿನ ಉಪಾಹಾರವನ್ನು ಆರ್ಡರ್ ಮಾಡಿದ್ದರು. ಅದರಲ್ಲಿದ್ದಂತೆ 196 ರೂ. ಪಾವತಿಸಿದ್ದರು. ಆದರೆ ಅವರಿಗೆ ಬಿಲ್ ಮೊತ್ತ 149 ರೂ. ಎಂದು ಬಂದಿದೆ. ಈ ಬಗ್ಗೆ ದೂರು ನೀಡಲು ಅವರು ಝೊಮ್ಯಾಟೋ ಆ್ಯಪ್‌ನ ಕಸ್ಟಮರ್ ಕೇರ್ ಸಂಖ್ಯೆಯನ್ನು ಸರ್ಚ್ ಮಾಡಿ ಅದರಲ್ಲಿ ದೊರೆತ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದಾತ, 47 ರೂ.ಗಳನ್ನು ವಾಪಸು ಮಾಡುತ್ತೇವೆ; ಅದಕ್ಕಾಗಿ Avval Desk Remote Desktop App ಡೌನ್‌ಲೋಡ್ ಮಾಡಿ ಎಂದು ತಿಳಿಸಿದ್ದ. ಅದರಂತೆ ಮಹಿಳೆಯು ಆ್ಯಪ್ ಡೌನ್‌ಲೋಡ್ ಮಾಡಿದರು. ಅನಂತರ ಆ ವ್ಯಕ್ತಿ ಗೂಗಲ್ ಪೇ ಓಪನ್ ಮಾಡಿ ಅವರ ಮೊಬೈಲ್ ಸಂಖ್ಯೆಯ ಮೊದಲ ನಾಲ್ಕು ಸಂಖ್ಯೆಯನ್ನು ಡಯಲ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಡಯಲ್ ಮಾಡಿದಾಗ ಬ್ಯಾಂಕ್ ಖಾತೆಯಿಂದ 96,081 ರೂ. ಕಡಿತವಾಗಿದೆ. ಝೊಮ್ಯಾಟೋ ಕಸ್ಟಮರ್ ಕೇರ್‌ನಿಂದ ಮಾತನಾಡುತ್ತಿರುವುದಾಗಿ ಆ ವ್ಯಕ್ತಿ ಸುಳ್ಳು ಹೇಳಿ ಮೋಸ ಎಸಗಿದ್ದಾನೆ ಎಂದು ಅವರು ಮಣಿಪಾಲ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.