ನವದೆಹಲಿ: ದೇಶದಲ್ಲಿ ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಏಪ್ರಿಲ್ 14ರ ಬಳಿಕವೂ ಲಾಕ್ ಡೌನ್ ಮುಂದುವರೆಯಲಿದೆಯೇ? ಎಂಬುದು ಸದ್ಯದ ಪ್ರಶ್ನೆ. ಕೇಂದ್ರ ಸರ್ಕಾರ ಏಪ್ರಿಲ್ 11 ಅಥವ 12ರಂದು ಈ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ. ಶಾಲೆ, ಕಾಲೇಜುಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ಮೇ 15ರ ತನಕ ಬಂದ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯಗಳು ಲಾಕ್ ಡೌನ್ ಮುಂದುವರೆಸದಿದ್ದರೂ ಹೆಚ್ಚು ಜನ ಸೇರುವುದನ್ನು ತಡೆಯಲು ಮೇ 15ರ ತನಕ ಬಂದ್ ಮಾಡಲು ಚಿಂತನೆ ನಡೆದಿದೆ.
ಮೇ 15ರ ತನಕ ದೇಶದ ಎಲ್ಲಾ ರಾಜ್ಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಂತೆ ನಿಷೇಧ ಹೇರುವ ಕುರಿತು ಚರ್ಚೆ ನಡೆಸಲಾಗಿದೆ. ಧಾರ್ಮಿಕ ಸಮಾರಂಭಗಳಿಗೆ ಹೆಚ್ಚು ಜನರು ಸೇರುತ್ತಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಿಲ್ಲ. ಆದ್ದರಿಂದ, ಕೊರೊನಾ ಸೋಂಕು ಹರಡುವ ಭೀತಿ ಇದೆ.
21 ದಿನಗಳ ಲಾಕ್ ಡೌನ್ ಮುಗಿದ ಬಳಿಕವೂ ಕೆಲವು ನಿರ್ಬಂಧಗಳನ್ನು ಮುಂದುವರೆಸಬೇಕು ಎಂದು ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಜಾರ್ಖಂಡ್ ರಾಜ್ಯಗಳು ಹೇಳಿವೆ. ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾದ ಮಹಾರಾಷ್ಟ್ರದಲ್ಲಿ ಮುಂಬೈ ಮತ್ತು ಪುಣೆಯಲ್ಲಿ ಲಾಕ್ ಡೌನ್ ಮುಂದುವರೆಯುವ ಸಾಧ್ಯತೆ ಇದೆ. ಬೇರೆ ಹಾಟ್ ಸ್ಪಾಟ್‌ಗಳಲ್ಲಿ ಲಾಕ್ ಡೌನ್ ತೆರವುಗೊಳಿಸುವ ಸಾಧ್ಯತೆ ಇದೆ.