Friday, April 26, 2024
Homeಕರಾವಳಿಖಾಸಗಿ ವ್ಯಕ್ತಿಗಳ ಅಧೀನದಲ್ಲಿ ಕೊಯನಾಡು ಸರ್ಕಾರಿ ಶಾಲೆ: ಹಳೆಯ ವಿದ್ಯಾರ್ಥಿಗಳ ಅಸಮಾಧಾನ

ಖಾಸಗಿ ವ್ಯಕ್ತಿಗಳ ಅಧೀನದಲ್ಲಿ ಕೊಯನಾಡು ಸರ್ಕಾರಿ ಶಾಲೆ: ಹಳೆಯ ವಿದ್ಯಾರ್ಥಿಗಳ ಅಸಮಾಧಾನ

spot_img
- Advertisement -
- Advertisement -

ಮಡಿಕೇರಿ: ಕೋವಿಡ್ ಸಂದಿಗ್ಧ ಪರಿಸ್ಥಿತಿಯ ಹಿನ್ನೆಲೆ ರಾಜ್ಯದ ಎಲ್ಲಾ ಶಾಲೆಗಳು ಬಂದ್ ಆಗಿ ಮೂರು ತಿಂಗಳುಗಳೇ ಕಳೆದಿದೆ. ದೇಶದ ಮುಂದಿನ ಪ್ರಜೆಗಳನ್ನು ರೂಪಿಸುವ ಶಾಲೆಗಳನ್ನು ವಿದ್ಯಾ ದೇಗುಲವೆಂದೇ ಗೌರವಿಸಲಾಗುತ್ತದೆ. ಆದರೆ ಇಲ್ಲೊಂದು ಸರ್ಕಾರಿ ಶಾಲೆ ತನ್ನ ಹೆಗ್ಗಳಿಕೆಯನ್ನು ಅರಿಯದೆ ಪರರ ಅಧೀನಕ್ಕೆ ಒಳಪಟ್ಟಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಸಂಪಾಜೆ ವ್ಯಾಪ್ತಿಯ ಕೊಯನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನದ ಇತಿಹಾಸವಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಈ ಶಾಲೆಯಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಿರುವ ಅನೇಕರು ದೇಶ, ವಿದೇಶಗಳಲ್ಲಿ ಉನ್ನತ ಸ್ಥಾನವನ್ನು ಹೊಂದುವ ಮೂಲಕ ಊರಿಗೆ ಗೌರವ ತಂದು ಕೊಟ್ಟಿದ್ದಾರೆ. ಆದರೆ ಎಲ್ಲಾ ಅನುಕೂಲತೆಗಳಿರುವ ಶಾಲೆ ಇಂದು ಖಾಸಗಿ ಗುತ್ತಿಗೆದಾರರ ದಾಸ್ತಾನು ಕೇಂದ್ರವಾಗಿ ಮತ್ತು ತರಗತಿಗಳು ಕಾರ್ಮಿಕರ ಆಶ್ರಯತಾಣವಾಗಿ ಮಾರ್ಪಟ್ಟಿದೆ. ಕಂಬಳದಂತ್ತಾಗಿರುವ ಮೈದಾನದಲ್ಲಿ ಇನ್ನು ಮುಂದೆ ವಿದ್ಯಾರ್ಥಿಗಳು ಆಟವಾಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಳೆಯ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲ್ಲು, ಮರಳಿನ ರಾಶಿ, ಕಾಂಕ್ರಿಟ್ ಮಿಶ್ರಣ ಘಟಕದ ಕಾರ್ಯ ನಿರ್ವಹಣೆ, ಕಾಮಗಾರಿಗಳ ಪರಿಕರಗಳು, ಬೃಹತ್ ವಾಹನಗಳ ಸಂಚಾರ ಮತ್ತು ನಿಲುಗಡೆಯಿಂದ ಶಾಲಾ ಆವರಣ ಸಂಪೂರ್ಣವಾಗಿ ಹದಗೆಟ್ಟಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ತರಗತಿಗಳು ಆರಂಭವಾಗುವ ಸಾಧ್ಯತೆಗಳಿದೆ. ಆದರೆ ಇಂದು ಈ ಶಾಲೆ ಇರುವ ಪರಿಸ್ಥಿತಿಯನ್ನು ಗಮನಿಸಿದರೆ ವಿದ್ಯಾಥಿಗಳಿಗೆ ಇಲ್ಲಿ ವಿದ್ಯಾರ್ಜನೆ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುತ್ತದೆ.

ಉತ್ತರಭಾರತ ಮತ್ತಿತರ ಭಾಗಗಳ ಕಾರ್ಮಿಕರು ಶಾಲೆಯ ಕೊಠಡಿಗಳಲ್ಲೇ ತಂಗುತ್ತಿದ್ದು, ಅಶುಚಿತ್ವದ ವಾತಾವರಣ ವಿದ್ಯಾ ದೇಗುಲದ ಅಂದಗೆಡಿಸಿದೆ. ಬೀಡಿ, ಸಿಗರೇಟ್, ಗುಟ್ಕಾ ಸೇರಿದಂತೆ ಅಮಲು ಪದಾರ್ಥಗಳ ತ್ಯಾಜ್ಯಗಳು ಅಲ್ಲಲ್ಲಿ ಹರಡಿಕೊಂಡಿದ್ದು, ಶಾಲೆಯ ಗೌರವಕ್ಕೆ ದಕ್ಕೆ ತಂದಿದೆ. ಕೋವಿಡ್ ಪರಿಸ್ಥಿತಿಯ ಕಾರಣಕ್ಕೆ ಶಾಲೆ ಬಂದ್ ಆಗಿದೆ ಎಂದು ಇಲ್ಲಿ ಏನು ಬೇಕಾದರೂ ಮಾಡಬಹುದೇ, ಇದನ್ನು ಕೇಳಲು ಶಿಕ್ಷಣ ಅಧಿಕಾರಿಗಳು ಅಥವಾ ಶಾಲಾಭಿವೃದ್ಧಿ ಸಮಿತಿ ಇಲ್ಲವೇ ಎಂದು ಹಳೆಯ ವಿದ್ಯಾರ್ಥಿಗಳಾದ ಮಾಧವ ಕೆ.ವಿ, ನಜೀರ್, ಅಬ್ದುಲ್ ಅಝೀಜ್, ಚೇತನ್ ಪಿ.ವಿ, ರಿಯಾಜ್ ಎಸ್.ಎ, ಉಮ್ಮರ್ ಚಡಾವು, ಸಲೀಂ, ಹರೀಶ, ರಜಾಕ್, ರಫೀಕ್, ಹನೀಫ್ ಸೇರಿದಂತೆ 20 ಕ್ಕೂ ಹೆಚ್ಚು ಮಂದಿ ಪ್ರಶ್ನಿಸಿದ್ದಾರೆ.

ತಕ್ಷಣ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆಗಳನ್ನು ಪರಿಶೀಲಿಸಬೇಕು, ಎಲ್ಲವನ್ನೂ ತೆರವುಗೊಳಿಸಲು ಆದೇಶಿಸಬೇಕು ಮತ್ತು ಶಾಲೆಗೆ ಆಗಿರುವ ಹಾನಿಯನ್ನು ಸಂಬಂಧಿಸಿದ ಗುತ್ತಿಗೆದಾರರರಿಂದಲೇ ಭರಿಸಬೇಕೆಂದು ಅವರುಗಳು ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!