ಮಂಗಳೂರು; ರೌಡಿ ಶೀಟರ್ ಸಮೀರ್ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ನೌಷಾದ್, ನಿಯಾಜ್, ತನ್ನೀರ್ ತನ್ನು, ಮೊಹಮ್ಮದ್ ಇಸ್ತಾಲ್ ಬಂಧಿತ ಆರೋಪಿಗಳು. ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಕೊಲೆಗೆ ಅಸಲಿ ಕಾರಣ ಗೊತ್ತಾಗಿದೆ.
ಮೃತ ಮೊಹಮ್ಮದ್ ಸಮೀರ್ ಅಲಿ ಕಳೆದ 2018ರಲ್ಲಿ ಆರೋಪಿ ಮೊಹಮ್ಮದ್ ನೌಷಾದ್‌ನ ಸಂಬಂಧಿಯಾಗಿದ್ದ ಟಾರ್ಗೆಟ್ ಇಲಿಯಾಸ್‌ನನ್ನು ಕೊಲೆ ಮಾಡಿದ್ದನು. ಇದಕ್ಕೆ ಪ್ರತಿಕಾರವಾಗಿ ಸಮೀರ್ ನನ್ನು ಕೊಲೆ ಮಾಡಲಾಗಿದೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳಿಂದ ಕೊಲೆಗೆ ಬಳಸಿದ ವಾಹನ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾರ್ಗದರ್ಶನದಲ್ಲಿ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಧನ್ಯ ನಾಯಕ್ ನೇತೃತ್ವದಲ್ಲಿ ಉಳ್ಳಾಲ ಠಾಣೆಯ ಇನ್ಸ್ಪೆಕ್ಟರ್ ಬಾಲಕೃಷ್ಣ ಹೆಚ್.ಎನ್. ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ನೌಷಾದ್ ವಿರುದ್ಧ ಅಪಹರಣ, ಎನ್‌ಡಿಪಿಎಸ್ ಕಾಯ್ದೆ ಉಲ್ಲಂಘನೆ, ಸುರತ್ಕಲ್ ಮತ್ತು ಸಕಲೇಶಪುರ ಠಾಣೆಯಲ್ಲಿ ಹತ್ಯೆ ಪ್ರಯತ್ನ ಪ್ರಕರಣಗಳು ದಾಖಲಾಗಿವೆ. ತನ್ವೀರ್ ತನ್ನು ಬಂಟ್ವಾಳ ಠಾಣೆಯಲ್ಲಿ ಜಾನುವಾರು ಕಳ್ಳತನ ಮತ್ತು ದರೋಡೆ ಪ್ರಯತ್ನ ಪ್ರಕರಣದ ಆರೋಪಿಯಾಗಿದ್ದಾನೆ.