
ವಾಷಿಂಗ್ಟನ್: ವೆನಿಜುವೆಲಾ ತೈಲ ರಫ್ತು ಮೇಲಿನ ಅಮೆರಿಕಾದ ನಿರ್ಬಂಧ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಕಾರ್ಯಾಚರಣೆ ನಡೆಸಿರುವ ಅಮೆರಿಕಾ ರಷ್ಯಾದ ಧ್ವಜ ಹೊಂದಿದ್ದ ತೈಲ ನೌಕೆಯನ್ನು ವಶಪಡಿಸಿಕೊಂಡಿದೆ.
ಎರಡು ವಾರಗಳ ಕಾಲ ಸಮುದ್ರದಲ್ಲಿ ನಡೆದ ಹೈಡ್ರಾಮಾದ ಬಳಿಕ ಅಮರಿಕಾದ ಕೋಸ್ಟ್ ಗಾರ್ಡ್ ಬೆಲ್ಲಾ-1 ನೌಕೆಯನ್ನು ವಶಪಡಿಸಿಕೊಂಡಿದೆ. ರಷ್ಯಾ ಜಲಾಂತರ್ಗಾಮಿ ಹಾಗೂ ಯುದ್ಧ ನೌಕೆಗಳ ಬೆಂಗಾವಲಿನ ನಡುವೆಯೇ ಕಾರ್ಯಾಚರಣೆ ನಡೆದಿದೆ.
ಅಮೆರಿಕಾದ ಫೆಡರಲ್ ಕೋರ್ಟ್ ವಾರಂಟ್ ಆಧಾರದ ಮೇಲೆ ಐಸ್ ಲ್ಯಾಂಡ್ ಸಮೀಪ ತೈಲ ನೌಕೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ರಷ್ಯಾದ ನೌಕೆಯನ್ನು ಅಮೆರಿಕಾ ವಶಪಡಿಸಿಕೊಂಡ ಮೊದಲ ಪ್ರಕರಣ ಇದಾಗಿದೆ.
ತೈಲ ನೌಕೆಯನ್ನು ಸೆರೆ ಹಿಡಿಯುವ ಮೂಲಕ ವೆನಿಜುವೆಲಾ ತೈಲ ದಿಗ್ಬಂಧನ ಕಟ್ಟುನಿಟ್ಟಾಗಿ ಮುಂದುವರಿಯಲಿದೆ ಎಂದು ಅಮೆರಿಕಾ ಘೋಷಿಸಿದ್ದು, ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.
ತೈಲ ನೌಕೆಯನ್ನು ವಶಪಡಿಸಿಕೊಂಡಿರುವ ಕಾರ್ಯಾಚರಣೆಯ ಮೂಲಕ ಅಮೆರಿಕಾ ಮತ್ತು ರಷ್ಯಾ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದಂತಾಗಿದೆ.


