ಲಕ್ನೋ : ಕಾನ್ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕುಖ್ಯಾತ ರೌಡಿ ಶೀಟರ್,ಎಂಟು ಪೊಲೀಸರನ್ನು ಹತ್ಯೆ ಮಾಡಿದ ಪಾತಕಿ ವಿಕಾಸ್ ದುಬೆ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ . ಕಾನ್ಪುರ ತಲುಪಿದ ನಂತರ ದುಬೆ ಪರಾರಿಯಾಗಲು ಪ್ರಯತ್ನಿಸಿದಾಗ ವಿಕಾಸ್ ದುಬೆ ಮತ್ತು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನಡುವೆ ಗುಂಡಿನ ಚಕಮುಖಿ ನಡೆದಿದೆ. ವಿಕಾಸ್ ಮೇಲೆ ಹಲವಾರು ಗುಂಡಿನ ದಾಳಿ ನಡೆದು ಆತ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ರೌಡಿ ಶೀಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಪೊಲೀಸರು ಗುರುವಾರ ಬಂಧಿಸಿದ್ದರು. ಆತನನ್ನು ಮಧ್ಯಪ್ರದೇಶ ಪೊಲೀಸರು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದು, ಕಾನ್ಪುರಕ್ಕೆ ಕರೆತರುವ ವೇಳೆ ಪೊಲೀಸರ ಬೆಂಗಾವಲು ವಾಹನ ಮಗುಚಿದೆ. ಈ ನಡುವೆ ಪರಾರಿಯಾಗಲು ಯತ್ನಿಸಿದ ವಿಕಾಸ್ ದುಬೆ ಎನ್‌ಕೌಂಟರ್‌ನಿಂದ ಸಾವಿಗೀಡಾಗಿರುವುದಾಗಿ ವರದಿಯಾಗಿದೆ.
ವಾಹನ ಉರುಳುವ ಮೊದಲು ಗುಂಡಿನ ಸದ್ದು ಕೇಳಿಸಿತು. ಮಳೆಯಿಂದ ತೊಯ್ದಿದ್ದ ರಸ್ತೆಯಲ್ಲಿ ವಾಹನ ಪಲ್ಟಿಯಾಯಿತು. ಈ ವೇಳೆ ಜೊತೆಗಿದ್ದ ಪೊಲೀಸರಿಂದ ರಿವಲ್ವಾರ್ ಕಸಿದು ವಿಕಾಸ್ ದುಬೆ ಪರಾರಿಯಾಗಲು ಯತ್ನಿಸಿದ. ಪೊಲೀಸರು ಗುಂಡು ಹಾರಿಸಿ ರೌಡಿಯನ್ನು ಕೊಂದರು’ ಎಂದು ಮಾಧ್ಯಮಗಳು ವರದಿ ಮಾಡಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.


