Wednesday, June 3, 2026
HomeUncategorizedಉಳ್ಳಾಲ ಮನೆ ಕುಸಿತ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ; ಮಂಗಳೂರಿನಲ್ಲಿ ಅಧಿಕಾರಿಗಳ ಸಭೆ

ಉಳ್ಳಾಲ ಮನೆ ಕುಸಿತ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ; ಮಂಗಳೂರಿನಲ್ಲಿ ಅಧಿಕಾರಿಗಳ ಸಭೆ

- Advertisement -
- Advertisement -

ಉಳ್ಳಾಲ: ಕುತ್ತಾರು ಮದನಿ ನಗರದಲ್ಲಿ ಮಳೆಗೆ ಮನೆ ಗೋಡೆ ಕುಸಿದು ನಾಲ್ವರು ಮೃತಪಟ್ಟ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ನಂತರ ಮಂಗಳೂರಿನ ವಿಪತ್ತು ನಿರ್ವಹಣಾ ಘಟಕಕ್ಕೂ ಭೇಟಿ ನೀಡಿ ಪರಿಶೀಲನೆ ‌ನಡೆಸಿದರು.

ಬಳಿಕ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜಿಲ್ಲೆಯ ಎಲ್ಲಾ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಕರೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿದಾದ ಬೆಟ್ಟ ಪ್ರದೇಶಗಳಲ್ಲಿ ಎಷ್ಟು ಮನೆಗಳಿವೆ? ಈ ಪೈಕಿ ಮಳೆಗಾಲದಲ್ಲಿ ಸಮಸ್ಯೆಗೆ ಸಿಲುಕಬಹುದಾದ ಮನೆಗಳು ಯಾವುವು? ಎಂದು ಸರ್ವೇ ನಡೆಸಲು ಸಚಿವ ಕೃಷ್ಣ ಭೈರೇಗೌಡ ಸೂಚಿಸಿದರು.

ಅಲ್ಲದೇ, ಮಳೆ ಸಂದರ್ಭದಲ್ಲಿ ಅಪಾಯದಂಚಿನಲ್ಲಿರುವ ಮನೆಗಳ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆಯೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಸಚಿವರು ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಉಳ್ಳಾಲಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವರು ಸ್ಥಳಕ್ಕೆ ಭೇಟಿಗೂ ಮುನ್ನ ಮಂಗಳೂರಿನಲ್ಲಿ ಸ್ಪೀಕರ್ ಯು.ಟಿ. ಖಾದರ್ ಮತ್ತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜೊತೆ ಚರ್ಚೆ ನಡೆಸಿದರು.

- Advertisement -

Latest News

error: Content is protected !!