Wednesday, May 15, 2024
Homeತಾಜಾ ಸುದ್ದಿಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ: ಹೆಚ್.ಡಿ.ಕೆ ಟ್ವೀಟ್

ಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ: ಹೆಚ್.ಡಿ.ಕೆ ಟ್ವೀಟ್

spot_img
- Advertisement -
- Advertisement -

ಬೆಂಗಳೂರು: ಕರ್ನಾಟಕದ ಶಾಂತಿ, ಸಾಮರಸ್ಯ ಕೆಡಿಸುವಂತ ಕೃತ್ಯಗಳು ರಾಜ್ಯದ ಬೆಳವಣಿಗೆ ದೃಷ್ಟಿಯಿಂದ ಕಳವಳಕಾರಿಯಾಗಿದೆ. ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸಿ ಬೇಳೆ ಬೇಯಿಸಿಕೊಳ್ಳುವ ಪ್ರವೃತ್ತಿ ಸಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಅವರು, ತಡರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಕಹಿ ಘಟನೆಗಳು ನನಗೆ ತೀವ್ರ ಆಘಾತ ಉಂಟು ಮಾಡಿವೆ. ಕರ್ನಾಟಕದ ಶಾಂತಿ, ಸಾಮರಸ್ಯ ಹಾಳು ಮಾಡುವ ದುಷ್ಪ್ರಯತ್ನಗಳು ಕಳವಳಕಾರಿ. ಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ ಎಂದಿದ್ದಾರೆ.

ಈದ್ಗಾ ಮೈದಾನದ ವಿವಾದಕ್ಕೆ ತೆರೆಬಿದ್ದ ನಂತರ ನೆಮ್ಮದಿಯಾಗಿದ್ದ ಹುಬ್ಬಳ್ಳಿಯ ಶಾಂತ ವಾತಾವರಣ ಕದಡುವ ಷಡ್ಯಂತ್ರವನ್ನು ಯಾರೂ ಸಹಿಸಬಾರದು. ಸಾಮರಸ್ಯ ಮೂಡಿಸಬೇಕಾದ ಜಾಲತಾಣದಲ್ಲಿ ಒಂದು ಧರ್ಮದ ಯುವಕ ಹಂಚಿಕೊಂಡ ಪ್ರಚೋದನಾತ್ಮಕ ಪೋಸ್ಟ್‌ ರಾದ್ಧಾಂತಕ್ಕೆ ಕಾರಣ. ಕಿಡಿಗೇಡಿ, ತಿಳಿಗೇಡಿ ಯುವಕನ ಕೃತ್ಯದಿಂದ ಉದ್ರಿಕ್ತಗೊಂಡ ಇನ್ನೊಂದು ಸಮುದಾಯದ ಕೆಲವರು ರಾತ್ರಿಯೆಲ್ಲ ಹುಬ್ಬಳ್ಳಿಯಲ್ಲಿ ಬೀಭತ್ಸ ಸೃಷ್ಟಿಸಿ ದ್ವೇಷದ ಬೆಂಕಿಗೆ ಪೆಟ್ರೋಲ್‌ ಸುರಿಯದೇ ಸಹನೆ ಮೆರೆಯಬೇಕಿತ್ತು. ಪೊಲೀಸರ ಮೇಲೆ ದಾಳಿ, ಠಾಣೆ, ಆಸ್ಪತ್ರೆ ಮೇಲೆ ಕಲ್ಲುಗಳನ್ನು ಎಸೆದು ಹಾನಿ ಮಾಡಬಾರದಿತ್ತು ಎಂದವರು ಹೇಳಿದ್ದಾರೆ.

ಕಿಡಿಗೇಡಿ ಯುವಕನ ಬಂಧನವಾಗಿದೆ. ಕಾನೂನು ಅವನನ್ನು ನೋಡಿಕೊಳ್ಳುತ್ತದೆ. ಇನ್ನೊಂದು ಸಮುದಾಯವು ಕಾನೂನನ್ನು ಕೈಗೆತ್ತಿಕೊಳ್ಳದೆ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು ಸಹನೆಯಿಂದ ವರ್ತಿಸಬೇಕು. ಕಳೆದ ಕೆಲ ದಿನಗಳಿಂದ ಕರ್ನಾಟಕ ಕೋಮುದಳ್ಳುರಿಯಲ್ಲಿ ಬೇಯುತ್ತಿದೆ, ಎಲ್ಲರಿಗೂ ನೋವಾಗುತ್ತಿದೆ. ಅದು ಮುಂದುವರಿಯುವುದು ಬೇಡ ಎಂದು ಇದೇ ವೇಳೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಅನುಭವದಿಂದ ಪಾಠ ಕಲಿಯುತ್ತಿಲ್ಲ ಎನ್ನುವುದಕ್ಕೆ ಹುಬ್ಬಳ್ಳಿ ಘಟನೆ ಒಂದು ನಿದರ್ಶನ. ಹಿಂದೆ ಬೆಂಗಳೂರಿನಲ್ಲಿ ಕಿಡಿಗೇಡಿ ಯುವಕನೊಬ್ಬ ಒಂದು ಧರ್ಮಗುರುವಿನ ಬಗ್ಗೆ ಪ್ರಚೋದನಾತ್ಮಕ ಪೋಸ್ಟ್‌ ಹಾಕಿದ್ದ ಪರಿಣಾಮ, ಶಾಸಕರೊಬ್ಬರ ಮನೆ, ಡಿಜೆ ಹಳ್ಳಿ ಪೊಲೀಸ್‌ ಠಾಣೆಯೇ ಬೆಂಕಿಗೆ ಆಹುತಿಯಾಗಿತ್ತು ಎಂದ ಅವರು, ಹುಬ್ಬಳ್ಳಿ ಇನ್ನೊಂದು ಡಿಜೆ ಹಳ್ಳಿ ಆಗುವುದನ್ನು ಪರಿಣಾಮಕಾರಿಯಾಗಿ ತಡೆದ ಹುಬ್ಬಳ್ಳಿ-ಧಾರವಾಡ ನಗರದ ಪೊಲೀಸ್‌ ಆಯುಕ್ತರು ಹಾಗೂ ಇಡೀ ಪೊಲೀಸ್‌ ಸಿಬ್ಬಂದಿಗೆ ನನ್ನ ಅಭಿನಂದನೆಗಳು. ಸಕಾಲಕ್ಕೆ ಅವರು ಎಚ್ಚೆತ್ತ ಪರಿಣಾಮ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಟ್ವೀಟಿಸಿದ್ದಾರೆ.

ಕುಂದಾಪುರದಿಂದ ಹಿಡಿದು ಹುಬ್ಬಳ್ಳಿವರೆಗೆ ನಡೆದ ಎಲ್ಲ ಘಟನೆಗಳನ್ನು ನೋಡಿದರೆ ಎದ್ದು ಕಾಣುವುದು ರಾಜ್ಯ ಸರಕಾರದ ಘೋರ ವೈಫಲ್ಯ. ಬಿಗಿಕ್ರಮ ಕೈಗೊಳ್ಳುವ ಬದಲಿಗೆ ಸರಕಾರ ಬೀಡುಬೀಸಾಗಿ ವರ್ತಿಸಿದ್ದೇ ಇಂಥ ಘಟನೆಗಳಿಗೆ ಕಾರಣ. ಹುಬ್ಬಳ್ಳಿ ಘಟನೆಯನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್‌ಡಿಕೆ ಒತ್ತಾಯಿಸಿದ್ದಾರೆ.

ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಜಾಲತಾಣಗಳ ಮೂಲಕ ಬೆಂಕಿ ಹಾಕಲಾಗುತ್ತಿದೆ. ಕೆಲ ಕಿಡಿಗೇಡಿಗಳಿಗೆ ಕಿಚ್ಚೆಂದರೆ ಬಲು ಇಷ್ಟವೆಂಬಂತೆ ಇದೆ. ಅವರಿಗೆ ಸೋಶಿಯಲ್‌ ಮೀಡಿಯಾ ಹಿಂಸೆ ಹರಡುವ ಟೂಲ್‌ಕಿಟ್‌ ಆಗಿಬಿಟ್ಟಿದೆ. ಪೊಲೀಸರು, ಮೊದಲು ಅಂಥವರ ಬುಡಕ್ಕೆ ಬೆಂಕಿ ಇಡಬೇಕಿದೆ. ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್‌ಗೆ ಇಂಥ ಕಿಡಿಗೇಡಿ ಘಟನೆಗಳೆಂದರೆ ಬಲು ಇಷ್ಟ. ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕವನ್ನು ಒಡೆದು ಆಳುವ ಮೂಲಕ ʼಬ್ರಿಟೀಷ್‌ ನೀತಿʼಯನ್ನೇ ಇವು ಅನುಸರಿಸುತ್ತಿವೆ. ಈ ಪಕ್ಷಗಳ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!