ಉಡುಪಿ; ಹಿರಿಯ ರಂಗಕರ್ಮಿ, ಹಾಸ್ಯ ನಟ, ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟೆ(59) ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ರಾಜು ತಾಳಿಕೋಟೆ ವಿಧಿವಶರಾಗಿದ್ದಾರೆ. ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಶೂಟಿಂಗ್ ಸಲುವಾಗಿ ರಾಜು ತಾಳಿಕೋಟೆ ಅವರು ಉಡುಪಿಗೆ ಬಂದಿದ್ದರು. ಚಿತ್ರೀಕರಣ ಮುಗಿಸಿ ರಾತ್ರಿ ವಿಶ್ರಾಂತಿ ಪಡೆಯುತ್ತಿರುವಾಗ ಭಾನುವಾರ ರಾತ್ರಿ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೂ ಕೂಡ ಅವರು ಬದುಕಿ ಉಳಿಯಲಿಲ್ಲ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಈ ಮೊದಲು ಕೂಡ ರಾಜು ತಾಳಿಕೋಟೆ ಅವರಿಗೆ ಹೃದಯಾಘಾತ ಆಗಿತ್ತು. ಆಗ ಚಿಕಿತ್ಸೆ ನೀಡಿ ಸ್ಟಂಟ್ ಹಾಕಲಾಗಿತ್ತು. ಈಗ ಒತ್ತಡ ಜಾಸ್ತಿ ಆಗಿದ್ದರಿಂದ ಮತ್ತೆ ಹಾರ್ಟ್ ಅಟ್ಯಾಕ್ ಆಗಿರಬಹುದು. ವಿಜಯಪುರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅವರ ಪುತ್ರ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ರಾಜು ತಾಳಿಕೋಟೆ ಅವರು ಸಕ್ರಿಯರಾಗಿದ್ದರು. ‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೇ’, ‘ರಾಜಧಾನಿ’, ‘ಅಲೆಮಾರಿ’, ‘ಮೈನಾ’, ‘ಟೋಪಿವಾಲಾ’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 7’ ರಿಯಾಲಿಟಿ ಶೋನಲ್ಲಿ ಅವರು ಸ್ಪರ್ಧಿಸಿದ್ದರು. ಕಿರುತೆರೆಯ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
‘ನಿನ್ನೆ ರಾತ್ರಿ 12 ಗಂಟೆಗೆ ರಾಜು ತಾಳಿಕೋಟೆ ಅವರಿಗೆ ಉಸಿರಾಟದ ತೊಂದರೆ ಆಯಿತು. ನಾನೇ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ನಿಧನರಾದರು. ನಮ್ಮ ಸಿನಿಮಾದ ಶೂಟಿಂಗ್ನಲ್ಲಿ 2 ದಿನ ಭಾಗವಹಿಸಿದ್ದರು. ಸಿನಿಮಾಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ’ ಎಂದು ನಟ ಶೈನ್ ಶೆಟ್ಟಿ ಅವರು ಹೇಳಿದ್ದಾರೆ.


