ಸುಳ್ಯ: ಎರಡು ದಿನಗಳ ಹಿಂದೆ ಪೈಚಾರಿನ ಹೊಟೇಲಿಗೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಸಾರ್ವಜನಿಕರೇ ಹಿಡಿದ ಘಟನೆ ಸುಳ್ಯದಲ್ಲಿ ನಡೆದಿದೆ.
ನ 30 ರಂದು ನಡೆದಿದ್ದ ಹೊಟೇಲ್ ಕಳ್ಳತನದ ಬಳಿಕ ಸ್ಥಳೀಯ ಯುವಕರು ಈತನ ಪತ್ತೆ ಗಾಗಿ ಹಗಲು ರಾತ್ರಿ ಎನ್ನದೇ ಗುಂಡ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಪುತ್ತೂರು, ಕಲ್ಲುಗುಂಡಿ ಮುಂತಾದ ಕಡೆಗಳಿಗೆ ಇಬ್ಬರು, ಮೂವರ ತಂಡವನ್ನು ಮಾಡಿ ಪತ್ತೆಗೆ ಮುಂದಾಗಿದ್ದರು. ಕಳ್ಳನ ಫೋಟೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರಿಸಿ ಆತ ಕಂಡಲ್ಲಿ ಮಾಹಿತಿ ನೀಡುವಂತೆ ತಿಳಿಸಿದ್ದರು.
ಪುತ್ತೂರು ಭಾಗದಲ್ಲಿ ಹುಡುಕಾಟ ನಡೆಸುತಿದ್ದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದ ಓರ್ವರಿಗೆ ಈ ಕಳ್ಳನನ್ನು ಪುತ್ತೂರು ರೈಲ್ವೆ ನಿಲ್ದಾಣದ ಬಳಿ ಕಂಡಿದ್ದು ಕೂಡಲೇ ಅಲ್ಲಿ ಹುಡುಕಾಟ ನಡೆಸುತಿದ್ದ ತಂಡಕ್ಕೆ ಮಾಹಿತಿ ಬಂದು ತಕ್ಷಣ ಅಲ್ಲಿಗೆ ತೆರಳಿ ಕಳ್ಳನನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆತನನ್ನು ಸುಳ್ಯಕ್ಕೆ ತಂದು ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆತನ ವಿಚಾರಣೆ ನಡೆಸಿದ ಸಂಧರ್ಭದಲ್ಲಿ ಆತನು ಮಾನಸಿಕ ಅಸ್ವಸ್ಥನಾಗಿದ್ದು ಬೆಲೆಬಾಳುವ ದಾಖಲೆ ಪತ್ರಗಳು ಆತನ ಕೈಯಲ್ಲೆ ಇದ್ದು ಆತನು ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿಯಲ್ಲಿ ನುಗ್ಗಿದ್ದು ಅಲ್ಲದೇ ಸಿಸಿ ಟಿವಿ ಚಿತ್ರಗಳ ಆಧಾರದಲ್ಲಿ ಆತನನ್ನು ಪತ್ತೆ ಹಚ್ಚಲಾಗಿದ್ದು ವಿಚಾರಣೆ ನಡೆಸಿ ದೂರುದಾರರು ತಮ್ಮ ದಾಖಲೆ ಪತ್ರಗಳು ದೊರೆತ ಹಿನ್ನೆಲೆಯಲ್ಲಿ ದೂರನ್ನು ಹಿಂಪಡೆದು ಆತನನ್ನು ಸುಳ್ಯ ಪರಿಸರದಿಂದ ಹೊರ ಕಳುಹಿಸಿ ಕೊಡಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.