Thursday, March 28, 2024
Homeತಾಜಾ ಸುದ್ದಿಕಟೀಲು ದೇವಿಗೆ ಪೂಜೆ ಮಾಡದೇ ಅರ್ಚಕರ ಪ್ರತಿಭಟನೆ: ಆಸ್ರಣ್ಣರು – ಅರ್ಚಕರ ನಡುವಿನ ಜಟಾಪಟಿಯಲ್ಲಿ ಭಕ್ತರು...

ಕಟೀಲು ದೇವಿಗೆ ಪೂಜೆ ಮಾಡದೇ ಅರ್ಚಕರ ಪ್ರತಿಭಟನೆ: ಆಸ್ರಣ್ಣರು – ಅರ್ಚಕರ ನಡುವಿನ ಜಟಾಪಟಿಯಲ್ಲಿ ಭಕ್ತರು ಕಂಗಾಲು

spot_img
- Advertisement -
- Advertisement -

ಮಂಗಳೂರು, ಮೇ 11: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಸ್ರಣ್ಣ ಕುಟುಂಬಸ್ಥರು ಮತ್ತು ಅರ್ಚಕರ ನಡುವಿನ ಜಟಾಪಟಿಯ ಕಾರಣ ಇಂದು ಮಧ್ಯಾಹ್ನದ ಪೂಜೆಯನ್ನೇ ವಿಳಂಬಗೊಳಿಸಿದ ಪ್ರಸಂಗ ನಡೆದಿದೆ. ಕೊನೆಗೆ ಮುಜರಾಯಿ ಇಲಾಖೆಯ ಅಧಿಕಾರಿಗಳ ವಾರ್ನಿಂಗ್ ಬಳಿಕ ಆಸ್ರಣ್ಣರು ಪೂಜೆ ನೆರವೇರಿಸಿದ್ದಾರೆ.

ದೇವಸ್ಥಾನದಲ್ಲಿ ಅರ್ಚಕರ ಪೈಕಿ ಕೀಳು ಶಾಂತಿ ಎನ್ನುವ ಹುದ್ದೆಯ ವಿಚಾರದಲ್ಲಿ ಕಳೆದ 22 ವರ್ಷಗಳಿಂದ ಮುಜರಾಯಿ ಆಯುಕ್ತರ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಸುದೀರ್ಘ ಕಾಲದ ಕೋರ್ಟ್ ಹೋರಾಟದ ಬಳಿಕ ತೀರ್ಪು ಹೊರಬಿದ್ದಿತ್ತು. ಮುಜರಾಯಿ ಇಲಾಖೆಯ ಆಯುಕ್ತ ರೋಹಿಣಿ ಸಿಂಧೂರಿ ಕಳೆದ ಮಾರ್ಚ್ 25ರಂದು ಈ ಬಗ್ಗೆ ಆದೇಶ ನೀಡಿದ್ದರು. ಕಟೀಲು ದೇವಸ್ಥಾನದ ಹರಿನಾರಾಯಣ ಆಸ್ರಣ್ಣ ಮತ್ತು ಅನಂತ ಆಸ್ರಣ್ಣ ವಿರುದ್ಧ ತೀರ್ಪು ಬಂದಿದ್ದರಿಂದ ಇವರ ಪ್ರತಿಷ್ಠೆಗೆ ಕುಂದು ಬಂದಿತ್ತು. ತೀರ್ಪಿನಲ್ಲಿ ಗುರುರಾಜ ಭಟ್ ಅವರೇ ಆನುವಂಶಿಕ ಕೀಳು ಶಾಂತಿ ಅರ್ಚಕರಾಗಿ ಕಾರ್ಯ ನಿರ್ವಹಿಸಬೇಕು ಎಂದು ಆದೇಶ ಮಾಡಲಾಗಿತ್ತು.

ಆದರೆ ಮುಜರಾಯಿ ಇಲಾಖೆಯಿಂದ ಬಂದಿದ್ದ ಆದೇಶವನ್ನು ದೇವಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ಆಸ್ರಣ್ಣ ಕುಟುಂಬಸ್ಥರು ಪಾಲಿಸಲು ತಯಾರಿರಲಿಲ್ಲ. ಕೋರ್ಟ್ ನೀಡಿದ್ದ ತೀರ್ಪನ್ನು ಗುರುರಾಜ ಭಟ್ ಕಡೆಯವರು ಇತ್ತೀಚೆಗೆ ದೇವಸ್ಥಾನದ ವ್ಯವಸ್ಥಾಪಕರಿಗೆ ತಂದು ತೋರಿಸಿದ್ದರು. ಆದರೆ, ಈ ಬಗ್ಗೆ ದೇವಸ್ಥಾನದ ವಕೀಲರ ಬಳಿ ಮಾಹಿತಿ ಪಡೆದು ತಿಳಿಸಲಾಗುವುದು ಎಂದು ಮ್ಯಾನೇಜರ್ ಹೇಳಿದ್ದರು. ಆಡಳಿತ ಮೊತ್ತೇಸರ ಸನತ್ ಕುಮಾರ್ ಶೆಟ್ಟಿಯವರು ಕೂಡ ಈ ಬಗ್ಗೆ ಸ್ವಲ್ಪ ಸಮಯ ಕೊಡಿ ಎಂದು ಮನವಿ ಮಾಡಿದ್ದರು.

ಇದಾಗಿ ಒಂದು ತಿಂಗಳ ಬಳಿಕ ದೇವಸ್ಥಾನಕ್ಕೆ ಬಂದಿದ್ದ ಗುರುರಾಜ ಭಟ್ ಅವರಿಗೆ ಇತರೇ ಅರ್ಚಕರ ಮೂಲಕ ತಡೆ ಒಡ್ಡಲಾಗಿದೆ. ಇಂದು ಬೆಳಗ್ಗೆ ಗುರುರಾಜ ಭಟ್ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದು ದೇವಸ್ಥಾನದಲ್ಲಿ ಆಸ್ರಣ್ಣ ಕುಟುಂಬಸ್ಥರ ಅಣತಿಯಂತೆ ಸೆಕ್ಯುರಿಟಿಯವರು ತಡೆ ಒಡ್ಡಿದ್ದಾರೆಂದು ಗುರುರಾಜ್ ಭಟ್ ಕಡೆಯವರು ತಿಳಿಸಿದ್ದಾರೆ.

ಹಾಗಿದ್ದರೂ, ದೇವಸ್ಥಾನದ ಗರ್ಭಗುಡಿ ಒಳಹೊಕ್ಕ ಗುರುರಾಜ ಭಟ್ ತನ್ನ ಕರ್ತವ್ಯ ಪಾಲಿಸಿದ್ದಾರೆ. ದೇವಸ್ಥಾನದಲ್ಲಿ ಕೀಳು ಶಾಂತಿ ಎಂದರೆ, ದೇವರಿಗೆ ನೈವೇದ್ಯ ಸಮರ್ಪಿಸುವುದು, ಪೂಜೆಗೆ ಆರತಿ ಹೊತ್ತಿಸುವುದು, ದೇವರನ್ನು ತಲೆಯಲ್ಲಿ ಹೊತ್ತುಕೊಂಡು ಬಲಿ ಸೇವೆ ನಡೆಸುವುದು ಇತ್ಯಾದಿ ಸೇವೆ ನಡೆಸಬೇಕಾಗಿದೆ.

ಈ ಹಿಂದೆ, ಗುರುರಾಜ ಭಟ್ ಕುಟುಂಬಸ್ಥರೇ ದೇವಸ್ಥಾನದಲ್ಲಿ ಕೀಳು ಶಾಂತಿ ಕರ್ತವ್ಯವನ್ನು ಮಾಡಿಕೊಂಡು ಬಂದಿದ್ದರು. ಗುರುರಾಜ್ ಭಟ್ಟರ ಅಜ್ಜ ಅಣ್ಣು ಭಟ್, ಆನಂತರ ಅವರ ಮಗ ಕೃಷ್ಣ ಭಟ್, ಸೋದರ ನಾರಾಯಣ ಭಟ್ ಸೇವೆ ಮಾಡಿದ್ದರು. 2001, ಎಪ್ರಿಲ್ 12ರ ವರೆಗೆ ಏಳು ವರ್ಷಗಳ ಕಾಲ ಕೃಷ್ಣ ಭಟ್ಟರ ಮಗ ಗುರುರಾಜ ಭಟ್ ಅವರೇ ಕೀಳು ಶಾಂತಿಯಾಗಿ ಕೆಲಸ ನಿರ್ವಹಿಸಿದ್ದರು. 2001ರಲ್ಲಿ ಆನುವಂಶಿಕ ಹುದ್ದೆಯ ವಿಚಾರದಲ್ಲಿ ಆಸ್ರಣ್ಣ ಕುಟುಂಬಸ್ಥರ ವಿರುದ್ಧ ಕೋರ್ಟ್ ವ್ಯಾಜ್ಯ ಉಂಟಾಗಿತ್ತು. ಅದೇ ಸಂದರ್ಭದಲ್ಲಿ ಹರಿನಾರಾಯಣ ಆಸ್ರಣ್ಣ ಮತ್ತು ಅನಂತ ಆಸ್ರಣ್ಣ ಅವರು ಗುರುರಾಜ್ ಭಟ್ ಅವರಿಗಿದ್ದ ಕೀಳು ಶಾಂತಿಯ ಹುದ್ದೆಯ ವಿಚಾರದಲ್ಲೂ ಕೋರ್ಟಿಗೆ ದೂರು ನೀಡಿದ್ದರಿಂದ ವ್ಯಾಜ್ಯ ಆರಂಭಗೊಂಡಿತ್ತು.

ಕೋರ್ಟ್ ತೀರ್ಪಿನ ಬಳಿಕ ಗುರುರಾಜ ಭಟ್ ಮೇ 11ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ ಆಸ್ರಣ್ಣ ಕುಟುಂಬಸ್ಥರು ಉದ್ದೇಶಪೂರ್ವಕ ಪೂಜೆಯನ್ನು ನಡೆಸದೆ ವಿಳಂಬಿಸಿದ್ದಾರೆಂದು ಗುರು ಭಟ್ ಕಡೆಯವರು ಹೇಳುತ್ತಿದ್ದಾರೆ. ಆನಂತರ, ಮಧ್ಯಾಹ್ನದ ಪೂಜೆಯನ್ನು ವಿಳಂಬಿಸಿದ ವಿಚಾರದಲ್ಲಿ ಮುಜರಾಯಿ ಇಲಾಖೆಯಿಂದ ಕರೆ ಬಂದಿದೆ ಎನ್ನಲಾಗುತ್ತಿದ್ದು ನೀವು ಪೂಜೆ ಮಾಡದಿದ್ದರೆ, ಬೇರೆ ಅರ್ಚಕರನ್ನು ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ 12 ಗಂಟೆಗೆ ನಡೆಯಬೇಕಿದ್ದ ಮಧ್ಯಾಹ್ನದ ಪೂಜೆಯನ್ನು ಎರಡು ಗಂಟೆ ಸುಮಾರಿಗೆ ಲಕ್ಷ್ಮೀನಾರಾಯಣ ಆಸ್ರಣ್ಣನೆರವೇರಿಸಿದ್ದಾರೆ.

ಇವರ ನಡುವೆ ಹಗೆತನ ಯಾಕೆ ?

ಆಸ್ರಣ್ಣ ಕುಟುಂಬಸ್ಥರು ಮತ್ತು ಗುರುರಾಜ ಭಟ್ ಕುಟುಂಬಸ್ಥರ ನಡುವೆ ಹಗೆತನ ಯಾಕೆ ಎನ್ನುವ ಬಗ್ಗೆ ನಿರ್ದಿಷ್ಟವಾಗಿ ತಿಳಿದುಬಂದಿಲ್ಲ. ಆನುವಂಶಿಕ ಕೀಳು ಶಾಂತಿ ಅರ್ಚಕರಾಗಿ ಮುರಲಿ ಉಪಾಧ್ಯಾಯ ಮತ್ತು ಗುರುರಾಜ ಭಟ್ ಅವರು ಮಾತ್ರ ಇದ್ದಾರೆ. ಇವರು ಪೂರ್ಣಾವಧಿಗೆ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸಬೇಕು. ಹಾಗಾಗಿ, ದೇವಸ್ಥಾನದ ಪೂಜೆ, ಸೇವೆ ಇತ್ಯಾದಿಗಳಲ್ಲಿ ಪೂರ್ಣಾವಧಿ ಅರ್ಚಕರಿಗೆ ಇಂತಿಷ್ಟು ಪರ್ಸೆಂಟೇಜ್ ಕೂಡ ಕೊಡಬೇಕಾಗುತ್ತದೆ. ಸದ್ಯಕ್ಕೆ ಆಸ್ರಣ್ಣ ಕುಟುಂಬಸ್ಥರನ್ನು ಹೊರತುಪಡಿಸಿದರೆ, ಉಳಿದವರೆಲ್ಲ ತಾತ್ಕಾಲಿಕ ನೆಲೆಯಲ್ಲಿ ಸಂಬಳಕ್ಕೆ ಇದ್ದಾರೆ. ಅವರಿಗೆ ಸೇವೆಗಳಲ್ಲಿ ಪಾಲು ಇರುವುದಿಲ್ಲ. ಇದೇ ಕಾರಣಕ್ಕೆ ಗುರುರಾಜ ಕುಟುಂಬಸ್ಥರು ದೇವಸ್ಥಾನದ ಒಳಗೆ ಎಂಟ್ರಿಯಾಗದಂತೆ ಆಸ್ರಣ್ಣ ಕುಟುಂಬಸ್ಥರು ಮಾಡುತ್ತಿದ್ದಾರೆ ಎಂಬುದಾಗಿ ಗುರುರಾಜ್ ಕಡೆಯವರು ಶಂಕೆ ವ್ಯಕ್ತಪಡಿಸಿದ್ದಾರೆ. ಬೇರೆ ಯಾವುದೇ ಹಗೆತನ ನಮ್ಮ ನಡುವೆ ಇಲ್ಲ ಎಂದಿದ್ದಾರೆ.

- Advertisement -
spot_img

Latest News

error: Content is protected !!