Tuesday, May 21, 2024
Homeತಾಜಾ ಸುದ್ದಿಮಂಗಳೂರಿನತ್ತ ಬಿ.ಕೆ. ಹರಿಪ್ರಸಾದ್ ಚಿತ್ತ: ಬಿಲ್ಲವ, ಮುಸ್ಲಿಂ ವೋಟ್ ಬ್ಯಾಂಕ್ ನತ್ತ ಕಣ್ಣು: ಲೋಕಸಭೆ ಚುನಾವಣೆಗೆ...

ಮಂಗಳೂರಿನತ್ತ ಬಿ.ಕೆ. ಹರಿಪ್ರಸಾದ್ ಚಿತ್ತ: ಬಿಲ್ಲವ, ಮುಸ್ಲಿಂ ವೋಟ್ ಬ್ಯಾಂಕ್ ನತ್ತ ಕಣ್ಣು: ಲೋಕಸಭೆ ಚುನಾವಣೆಗೆ ಪೂರ್ವ ತಯಾರಿ ಆರಂಭ

spot_img
- Advertisement -
- Advertisement -

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಕೋಟೆ ಮಂಗಳೂರಿನತ್ತ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಚಿತ್ತನೆಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಸ್ಪಷ್ಟಪಡಿಸಿರುವ ಅವರು, ಮಂಗಳೂರನ್ನು ಚುನಾವಣಾ ಅಖಾಡವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಪ್ರಬಲ ಸಮುದಾಯಗಳಾದ ಬಿಲ್ಲವ ಹಾಗೂ ಮುಸ್ಲಿಂ ಓಟ್‌ ಬ್ಯಾಂಕ್‌ನತ್ತ ಹರಿಪ್ರಸಾದ್ ಚಿತ್ತನೆಟ್ಟಿದ್ದು, ಈ ನಿಟ್ಟಿನಲ್ಲಿ ಪೂರ್ವ ತಯಾರಿಗಳು ಆರಂಭಗೊಂಡಂತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿ.ಕೆ. ಹರಿಪ್ರಸಾದ್ ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ನಡೆಸಿದ್ದರು. ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಸ್ಪರ್ಧಿಸಿದ್ದ ಹರಿಪ್ರಸಾದ್ ಸೋಲನ್ನು ಅನುಭವಿಸಿದ್ದರು. ಬಳಿಕ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾದ ಅವರು ವಿಧಾನಪರಿಷತ್‌ ಪ್ರತಿಪಕ್ಷದ ನಾಯಕರಾಗಿ ಆಯ್ಕೆಗೊಂಡರು. ಇದೀಗ ಸಂಘ ಪರಿವಾರ ಹಾಗೂ ಬಿಜೆಪಿಯ ಪ್ರಯೋಗ ಶಾಲೆ ಎಂದೇ ಕರೆಯಲ್ಪಡುವ ಮಂಗಳೂರಿನತ್ತ ಚಿತ್ತ ನೆಟ್ಟಿದ್ದು ಚುನಾವಣೆಯ ಭೂಮಿಕೆಯನ್ನು ಈಗಾಗಲೇ ರೂಪಿಸುತ್ತಿರುವಂತಿದೆ


ಬಿ.ಕೆ. ಹರಿಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ವಿದ್ಯಾರ್ಥಿ ಜೀವನದಲ್ಲಿ ಬೆಂಗಳೂರಿನಲ್ಲಿ ನೆಲೆನಿಂತ ಅವರು ಬಳಿಕ ರಾಷ್ಟ್ರರಾಜಕಾರಣದಲ್ಲೇ ಗುರುತಿಸಿಕೊಂಡರು. ಆರ್‌ಎಸ್‌ಎಸ್ ಹಾಗೂ ಪರಿವಾರದ ಸಂಘಟನೆಗಳ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವ ಅವರು, ಇದೀಗ ಈ ಸಿದ್ಧಾಂತದ ಪ್ರಯೋಗ ಶಾಲೆಯಲ್ಲೇ ಅದೃಷ್ಟ ಪರೀಕ್ಷೆಗೆ ಸಜ್ಜುಗೊಳ್ಳುತ್ತಿದ್ದಾರೆ. ಇಲ್ಲಿನ ಜಾತಿ ಲೆಕ್ಕಾಚಾರ ತಮ್ಮ ಕೈ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಸಮುದಾಯ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಒಟ್ಟು ಮತದಾರರ ಸಂಖ್ಯೆ- 16,97,417 ಪೈಕಿಜಾತಿವಾರು ಮತದಾರರ ಲೆಕ್ಕಾಚಾರ ನೋಡಿದರೆ ಬಿಲ್ಲವ ಮತದಾರರ ಸಂಜ್ಯೆ 4.30 ಲಕ್ಷದಷ್ಟಿದೆ.

ಇನ್ನು, ಮುಸ್ಲಿಂ ಮತದಾರರು4,50,000 ಇದ್ದರೆ, ಕ್ರೈಸ್ತರು 1,60,000 ಇದ್ದಾರೆ. ಇವರನ್ನು ಹೊರತಾಗಿ ಬಂಟರು- 3 ಲಕ್ಷ, ದಲಿತ- 1.30 ಲಕ್ಷ, ಬ್ರಾಹ್ಮಣ- 1.20 ಲಕ್ಷ, ಒಕ್ಕಲಿಗ – 75 ಸಾವಿರ ಹಾಗೂ ಇತರೆ ಮತದಾರರು 30 ಸಾವಿರ ಇದ್ದಾರೆ.

ಚುನಾವಣೆಯಲ್ಲಿ ಬಿಲ್ಲವ ಹಾಗೂ ಮುಸ್ಲಿಮ್ ಮತಗಳೇ ನಿರ್ಣಾಯಕವಾಗಿವೆ. ಬಿ.ಕೆ. ಹರಿಪ್ರಸಾದ್ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜೊತೆಗೆ ಮುಸ್ಲಿಂ ಸಮುದಾಯದಲ್ಲೂ ಇವರ ಪರವಾದ ಒಲವಿದೆ. ಜಿಲ್ಲೆಯಲ್ಲಿ ಈ ಹಿಂದೆ ಬಿಲ್ಲವ ಸಮುದಾಯಕ್ಕೆ ಸೇರಿದ ಹಿರಿಯ ಕಾಂಗ್ರೆಸ್ ಮುಖಂಡರಾದ ಜನಾರ್ಧನ ಪೂಜಾರಿಯವರು ಸ್ಪರ್ಧೆ ನಡೆಸಿದ್ದರೂ ಸತತವಾಗಿ ಸೋಲನ್ನು ಅನುಭವಿಸಿದ್ದರು.

1993ರಲ್ಲಿ ಮಂಗಳೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದ್ದಧನಂಜಯ ಕುಮಾರ್ ನಾಲ್ಕು ಬಾರಿ ಸಂಸದರಾಗಿ ಆಯ್ಕೆಗೊಂಡಿದ್ದರು.ಧನಂಜಯ ಕುಮಾರ್‌ ಬಳಿಕ ಡಿ.ವಿ. ಸದಾನಂದ ಗೌಡ ಅವರು ಮಂಗಳೂರಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಸತತ ಮೂರನೇ ಬಾರಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದಾರೆ. ಹೀಗಿರುವ ಬಿಜೆಪಿಯ ಬಲಾಢ್ಯ ಕ್ಷೇತ್ರದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿ.ಕೆ. ಹರಿಪ್ರಸಾದ್ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ.

ಸದ್ಯ ಹರಿಪ್ರಸಾದ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸುತ್ತಾಟ ನಡೆಸುತ್ತಿದ್ದಾರೆ. ಅಭಿನಂದನಾ ಸಮಾರಂಭ, ಮಸೀದಿ, ದರ್ಗಾ, ದೇವಸ್ಥಾನ, ಚರ್ಚ್‌ಗಳ ಭೇಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಜನಾರ್ಧನ ಪೂಜಾರಿ ಮನೆಗೂ ಭೇಟಿ ನೀಡಿ ಆಶೀರ್ವಾದ ಪಡೆದು ಬಂದಿದ್ದರು.

ಈ ಬಾರಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಹರಿಪ್ರಸಾದ್ ಭೇಟಿ ನೀಡಿ ವೈಯಕ್ತಿಕವಾಗಿ ಧನ ಸಹಾಯ ಮಾಡುತ್ತಿದ್ದಾರೆ. ಇದು ಜಿಲ್ಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಭೂಮಿಕೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆ ಎಂದೇ ಚರ್ಚೆಗಳು ನಡೆಯುತ್ತಿವೆ. ಇವೆಲ್ಲದರ ನಡುವೆ ಬಿ.ಕೆ. ಹರಿಪ್ರಸಾದ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದರೂ ಅಧಿಕೃತವಾಗಿ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಅನಧಿಕೃತವಾಗಿ ಈ ಕ್ಷೇತ್ರ ಮಂಗಳೂರು ಎಂದು ಅವರ ನಡೆ-ನುಡಿಗಳೇ ಹೇಳುತ್ತಿವೆ.

- Advertisement -
spot_img

Latest News

error: Content is protected !!