ಬಂಟ್ವಾಳ: ಇಲ್ಲಿನ ಬಿಸಿರೋಡು ಮೂಲದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ (97) ಮಂಗಳವಾರ ಬೆಳಿಗ್ಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಬಿ.ಸಿ.ರೋಡಿನವರಾದ ಇವರ ಕಳೆದ ಕೆಲವು ಸಮಯಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಶಿವಮೊಗ್ಗದ ಮಗನ ಮನೆಯಲ್ಲಿ ವಾಸ್ತವ್ಯವಿದ್ದರು.
ಇವರು ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್, ತೆಲುಗು ಸೇರಿ ಪಂಚಭಾಷೆ ಬಲ್ಲವರು.1942ರ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.ಅಂದಿನ ಕಾಂಗ್ರೇಸ್ ಸೇವಾದಳಕ್ಕೆ ಸೇರಿಕೊಂಡು ಗುಪ್ತವಾಗಿ ವಿವಿಧೆಡೆ ನಡೆಯುವ ಚಳುವಳಿಗಳಲ್ಲಿ ಭಾಗವಹಿಸಿದ್ದರು.
1946 ರಲ್ಲಿ ಬಂಧಿತರಾಗಿ ಶಿವಮೊಗ್ಗದ ಜೈಲಿನಲ್ಲಿ2 ತಿಂಗಳ ಜೈಲು ಶಿಕ್ಷೆ ಗೆ ಒಳಗಾದರು. ಸ್ವಾತಂತ್ರ್ಯ ಸಿಕ್ಕ ನಂತರವೂ ತಮ್ಮ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡ ಇವರು, ಗಾಂಧೀಜಿ ಯವರು ಹಾಕಿಕ್ಕೊಟ್ಟ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
ತಮ್ಮ ಆರು ಜನ ಮಕ್ಕಳೊಂದಿಗೆ, ಅಣ್ಣನ ಹಾಗೂ ಇತರ ದೂರದ ಊರಿನ ಅನೇಕ ವಿಶ್ವಕರ್ಮ ಜನಾಂಗದ ಮಕ್ಕಳಿಗೆ ಆಶ್ರಯದಾತರಾಗಿ ಮಾದರಿ ಬದುಕನ್ನು ಕಟ್ಟಿಕೊಂಡವರು.ಮೃತರು ಪತ್ನಿ ರಾಜೀವಿ, ಪುತ್ರ ಸತೀಶ್ ಹಾಗೂ ಐದು ಮಂದಿ ಹೆಣ್ಣುಮಕ್ಕಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.