“ಪ್ರವೀಣ್ ಹತ್ಯೆಯಿಂದಾಗಿ ನಮ್ಮ ಕಾರ್ಯಕರ್ತರು ವಿಚಲಿತರಾಗಿದ್ದಾರೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಏನೂ ಮಾಡಲಾಗುತ್ತಿಲ್ಲ. ಆದರೂ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳನ್ನು ಸರ್ಕಾರ ಶೀಘ್ರವೇ ಬಂಧಿಸುವ ವಿಶ್ವಾಸವಿದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ ಟಿ ರವಿ, ” ಎರಡು ಕಡೆಗಳಲ್ಲಿ ನಮ್ಮದೇ ಸರ್ಕಾರವಿದ್ದರೂ ಇಂತಹ ವಿದ್ರೋಹದ ಕೃತ್ಯಗಳು ನಡೆಯುತ್ತಿರುವುದರ ಬಗ್ಗೆ ಅವರು ಅಸಹನೆ ವ್ಯಕ್ತಪಡಿಸಿದರು. ದಿನದಿಂದ ದಿನಕ್ಕೆ ಜಿಹಾದಿ ಮನಸ್ಥಿತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ನಾವು ನಮ್ಮ ಸಮಾಜ ಮತ್ತು ವ್ಯವಸ್ಥೆಯನ್ನು ಜಿಹಾದ್ ವಿರುದ್ಧ ಹೋರಾಟ ಮಾಡಲು ಅಣಿಗೊಳಿಸಬೇಕಿದೆ” ಎಂದು ಹೇಳಿದರು.
ಇನ್ನು ಪ್ರವೀಣ್ ನೆಟ್ಟಾರು ಬಗ್ಗೆ ಮಾತನಾಡಿದ ಸಿಟಿ ರವಿ, “ಪ್ರವೀಣದ ನೆಟ್ಟಾರು ಮಾನವೀಯ ಕಳಕಳಿ ಇದ್ದಂತಹ ವ್ಯಕ್ತಿ. ಪ್ರಾಣಿಗೂ ಯಾವುದೇ ಸಮಸ್ಯೆ ಮಾಡದ ವ್ಯಕ್ತಿ ಆತ. ಬರಿ ಶಬ್ದಗಳಲ್ಲಿ ಆತನಿಗೆ ಸಂತಾಪ ಸಲ್ಲಿಸಿದರೆ ಅದು ಸಮಂಜಸವಾಗುವುದಿಲ್ಲ. ಇನ್ನು ನಾವೂ ಅಪರಾಧಿಗಳನ್ನು ಹೀಗೆಯೇ ಬಿಟ್ಟಿದ್ದಕ್ಕೆ ಚಂದ್ರು, ಹರ್ಷ, ಈಗ ಪ್ರವೀಣ್ ಕೊಲೆಯಾಗಿದೆ. ಮುಂದೆ ಇನ್ಯಾರೋ ಎನ್ನುವ ಆತಂಕ ಕಾಡುತ್ತಿದೆ. ಈ ಬಗ್ಗೆ ನಮ್ಮ ಕಾರ್ಯಕರ್ತರೂ ಅಸಹಾಯಕತೆ ತೋಡಿಕೊಳ್ತಿದ್ದಾರೆ” ಎಂದು ರವಿ ಹೇಳಿದರು.
“ಈ ವಿಚಾರದಲ್ಲಿ ನ್ಯಾಯ ಕೇಳಲು ನಾನು ಸಿಎಂ ಭೇಟಿ ಮಾಡಲು ಹೋಗ್ತಿದ್ದೇನೆ. ಕಾರ್ಯಕರ್ತರ ಭಾವನೆ ಜೊತೆಗೆ ನಾವೂ ಇದ್ದೇವೆ. ನಾವು ಕೇವಲ ಅಧಿಕಾರ ಮಾಡಲು ಬಂದಿಲ್ಲ. ಹೀಗಾಗಿ ಅವರ ಬೇಡಿಕೆಗೆ ಅನುಗುಣವಾಗಿ ಸಿಎಂ ಭೇಟಿ ಮಾಡಿ ಮನವಿ ಮಾಡಲಾಗುವುದು” ಎಂದು ಸಿಟಿ ರವಿ ತಿಳಿಸಿದರು. ಇದೇ ವೇಳೆ ಕಾಂಗ್ರೆಸ್ ಬಗೆಗೂ ವಾಗ್ದಾಳಿ ನಡೆಸಿದ ಸಿಟಿ ರವಿ, “ಅಮರಾವತಿಯಲ್ಲಿ, ಉದಯಪುರದಲ್ಲಿ ನಡೆದ ಒಂದು ಘಟನೆಯ ಒಂದು ಭಾಗದಂತೆ ಪ್ರವೀಣ್ ಹತ್ಯೆಯೂ ಕಾಣುತ್ತಿದೆ. ಸಿದ್ದರಾಮಯ್ಯ ಕಾಲದಲ್ಲೂ ಸರಣಿ ಹತ್ಯೆ ನಡೆಯುತ್ತಿತ್ತು. ಈಗಲೂ ಅದೇ ರೀತಿ ನಡೆಯುತ್ತಿದೆ ಅನ್ನೋ ಆರೋಪ ಇದೆ. ಆದರೆ, ಹಿಂದೆ ಹಿಂದೂ ವಿರೋಧಿ ಸರ್ಕಾರವಿತ್ತು, ಈಗ ಹಿಂದೂ ಪರ ಸರ್ಕಾರ ಇದೆ. ಇಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ” ಎಂದು ಹೇಳಿದರು.


