ಅಮರಾವತಿ, ಏ.26-ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಕಾಲಹರಣ ಮಾಡಲು ಇಸ್ಪೀಟ್ ಆಟದಲ್ಲಿ ತೊಡಗಿದ್ದ 24 ಮಂದಿಗೆ ಕೋವಿಡ್-19 ವೈರಾಣು ಸೋಂಕು ತಗುಲಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಬಡಾವಣೆಯೊಂದರಲ್ಲಿ ನಡೆದಿದೆ.
ಒಟ್ಟು 24 ಜನರಿಗೆ ಹೋಲ್‍ಸೇಲ್ ಆಗಿ ಸೋಂಕು ಹಬ್ಬಿದ ಮಹಾನುಭಾವ ಟ್ರಕ್ ಡ್ರೈವರ್. ಲಾಕ್‍ಡೌನ್ ಹಿನ್ನಲೆಯಲ್ಲಿ ಬೋರ್ ಆಗುತ್ತಿದ್ದೆ ಎಂದು ಹೇಳಿದ ಈತ ಕೃಷ್ಣ ಲಂಕಾ ಬಡಾವಣೆಯ ತನ್ನ ಅಕ್ಕಪಕ್ಕದ ಮನೆಯವರು ಮತ್ತು ಬಡವಾಣೆಯ ಒಟ್ಟು 24 ಮಂದಿಯನ್ನು ಕಾಡ್ರ್ಸ್ ಆಡಲು ಒಗ್ಗೂಡಿಸಿದ್ದ.
ಲಾಕ್‍ಡೌನ್ ನೀತಿ ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇವರೆಲ್ಲರೂ ಇಸ್ಪೀಟ್ ಆಡಿದರು. ಇವರಲ್ಲಿ ಕೆಲವರು ಮಹಿಳೆಯರೂ ಇದ್ದರು. ಒಂದು ದಿನದೊಳಗೆ ಇವರೆಲ್ಲರಿಗೂ ಕೊರೊನಾ ವೈರಸ್ ಸೋಂಕು ಲಕ್ಷಣಗಳು ಗೋಚರಿಸಿತು.
ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತು. ಟ್ರಕ್ ಚಾಲಕನಿಗೆ ಸೋಂಕು ಇರುವುದು ತಿಳಿಯದೇ ಇವರೆಲ್ಲರೂ ಆತನೊಂದಿಗೆ ಇಸ್ಟೀಟ್ ಆಡಿದ್ದೇ ಕಂಟಕವಾಯಿತು.
ಎಲ್ಲರೂ ಈಗ ಐಸೋಲೇಷನ್‍ನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಈಗ ಕೃಷ್ಣ ಲಂಕಾ ಬಡಾವಣೆಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಟ್ರಕ್ ಡ್ರೈವರ್‍ಗೆ ಬಡಾವಣೆ ಮಂದಿ ಹಿಡಿಶಾಪ ಹಾಕುತ್ತಿದ್ದಾರೆ.
ಇದೇ ವಿಜಯವಾಡ ಜಿಲ್ಲೆಯ ಮತ್ತೊಂದು ಪ್ರದೇಶದಲ್ಲಿ ಲಾರಿ ಚಾಲಕನೊಬ್ಬ ತನ್ನ ಅಕ್ಕಪಕ್ಕದ ಮನೆಯಲ್ಲಿದ್ದ 15 ಮಂದಿಗೆ ಕೊರೊನಾ ಸೋಂಕು ಹಬ್ಬಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.