ದಾವಣಗೆರೆ: ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ನಬಾರ್ಡ್ ನಿಂದ ರಾಜ್ಯಕ್ಕೆ ಬರಬೇಕಾದ ಶೇ. 58 ರಷ್ಟು ಹಣವನ್ನು ಕಡಿತಗೊಳಿಸಿ ಭಾರೀ ಅನ್ಯಾಯ ಮಾಡಿದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಅವರು ಈ ಕುರಿತಂತೆ ದಾವಣಗೆರೆಯಲ್ಲಿ ಮಾತನಾಡಿ, ‘ಕೇಂದ್ರದ ನಬಾರ್ಡ್ ನಿಂದ ಕರ್ನಾಟಕಕ್ಕೆ ಬರಬೇಕಾದ ಶೇ. 58 ರಷ್ಟು ಹಣವನ್ನು ಕಡಿತಗೊಳಿಸಿದೆ. ಈ ಬಗ್ಗೆ ಪ್ರತಿಪಕ್ಷ ಬಿಜೆಪಿಯವರು ಏನೂ ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಸಾಲ ಕೊಡಲು ಅನುಕೂಲವಾಗುತ್ತಿದ್ದ ನಬಾರ್ಡ್ ಹಣವನ್ನು ಅರ್ಧಕ್ಕಿಂತ ಹೆಚ್ಚು ಕಡಿಮೆ ಮಾಡಿದೆ. ಮೊದಲು 5700 ಕೋಟಿ ರೂ. ಬರುತ್ತಿದ್ದ ಹಣವನ್ನು 2700 ಕೋಟಿಗೆ ಕಡಿತ ಮಾಡಲಾಗಿದೆ. ಇಂಥ ತೀರ್ಮಾನ ಕೈಗೊಳ್ಳಲು ಬಿಜೆಪಿಯವರಿಗೆ ಮನಸ್ಸಾದರೂ ಹೇಗೆ ಬಂತು?,’ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
‘ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜಾಧ್ಯಕ್ಷ ವಿಜಯೇಂದ್ರ, ಆರ್. ಅಶೋಕ್ ರಾಜ್ಯದ ಗ್ಯಾರಂಟಿ ಯೋಜನೆ ಬಗ್ಗೆ, ಪಡಿತರಚೀಟಿ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಅವರು ನಬಾರ್ಡ್‌ನಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಏಕೆ ಮಾತನಾಡುತ್ತಿಲ್ಲ?,’ ಎಂದು ಪ್ರಶ್ನಿಸಿದರು.


