Wednesday, April 24, 2024
Homeತಾಜಾ ಸುದ್ದಿಸುರಂಗ ಕೊರೆದ ಕೃಷಿ ಸಾಹಸಿ ಅಮೈ ಮಹಾಲಿಂಗ ನಾಯ್ಕ್ ಗೆ ಪದ್ಮಶ್ರೀ ಗೌರವ

ಸುರಂಗ ಕೊರೆದ ಕೃಷಿ ಸಾಹಸಿ ಅಮೈ ಮಹಾಲಿಂಗ ನಾಯ್ಕ್ ಗೆ ಪದ್ಮಶ್ರೀ ಗೌರವ

spot_img
- Advertisement -
- Advertisement -

ವಿಟ್ಲ: ಸುರಂಗ ಕೊರೆದು ಕೃಷಿ ಭೂಮಿಯನ್ನು ಹಸನಗಿಸಿದ್ದ ವಿಟ್ಲದ ಕೇಪು ಗ್ರಾಮದ ಅಮೈ ನಿವಾಸಿ ಪ್ರಗತಿಪರ ಕೃಷಿಕ ಮಹಾಲಿಂಗ ನಾಯ್ಕ್ ಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.

ಮಹಾಲಿಂಗ ನಾಯ್ಕ್ ಅವರು ತಮ್ಮ ಕೃಷಿ ಜಮೀನಿಗೆ ನೀರಿಲ್ಲದ ಸಂದರ್ಭದಲ್ಲಿ ಏಕಾಂಗಿಯಾಗಿ ಸುರಂಗ ಕೊರೆದು ಹಲವು ವರ್ಷ ಶ್ರಮಪಟ್ಟ ಫಲವಾಗಿ ಅಂತಿಮವಾಗಿ ಒರತೆ ದೊರೆತು ನೀರ ಝರಿಯನ್ನು ಹರಿಸಿ ಕೃಷಿ ಭೂಮಿಗೆ ನೀರುಣಿಸಲು ಶಕ್ತರಾಗಿದ್ದಾರೆ.

ಇವರು ಮೊದಲು ಅಡಕೆ, ತೆಂಗಿನ ಮರ ಏರುತ್ತ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡವರು 40 ವರ್ಷ ಹಿಂದೆ ಸ್ವಂತ ತೋಟದ ಕನಸುಕಂಡಿದ್ದರು, ಆದರೆ ಅವರಲ್ಲಿ ಭೂಮಿ ಇರಲಿಲ್ಲ. ಅವರು ಕೂಲಿಗೆ ಹೋಗುತ್ತಿದ್ದ ಅಮೈ ಮಹಾಬಲ ಭಟ್ಟರೇ 2 ಎಕರೆ ಭೂಮಿಯನ್ನು ನಾಯ್ಕರಿಗೆ ನೀಡಿದರು. ಹೀಗೆ 1978ರಲ್ಲಿ ಅವರಿಗೆ ಭೂಮಿ ಸಿಕ್ಕಿತು. ಆದರೆ ಬೋಳುಗುಡ್ಡ ಜಾಗವದು, ಅಲ್ಲಿ ನೀರು ಸಿಗುವ ಸಾಧ್ಯತೆ ಇಲ್ಲ. ಹಾಗೆ ಮೆಲ್ಲನೆ ಗುಡಿಸಲು ಕಟ್ಟಿದರು, ಕುಡಿಯುವ ನೀರಿಗಾಗಿ ಪಕ್ಕದ ಮನೆಯ ಅವಲಂಬನೆ. ಅಲ್ಲಿ ಬಾವಿ ತೋಡುವುದೂ ಅಸಾಧ್ಯ. ಹಾಗಾಗಿ ಇದ್ದ ದಾರಿ ಒಂದೇ ಸುರಂಗ ಕೊರೆಯುವುದು. ಅರ್ಧದಿನ ಕೂಲಿ ಕೆಲಸ, ಉಳಿದ ಹೊತ್ತು ರಾತ್ರಿಯೂ ಸೇರಿ ಸುರಂಗ ಕೊರೆತ. ಸೀಮೆ ಎಣ್ಣೆ, ತೆಂಗಿನೆಣ್ಣೆ ದೀಪದ ಬೆಳಕಲ್ಲೇ ಸುರಂಗ ಕೊರೆದರು.

ಮೊದಲ ಸುರಂಗದಲ್ಲಿ ನೀರು ಸಿಗಲಿಲ್ಲ. ಆ ಬಳಿಕ ಸತತ 25 ಮೀಟರ್ ಉದ್ದದ ಐದು ಸುರಂಗಗಳನ್ನು ಕೊರೆದರೂ ನೀರು ಸಿಗದೆ ಊರಿನವರಿಂದ ಗೇಲಿಗೊಳಗಾಗುವ ಸ್ಥಿತಿ. ನಿರಾಶರಾಗದೆ 6ನೇ ಸುರಂಗದ ಕೆಲಸಕ್ಕೆ ಹೊರಟ ಅವರಿಗೆ ನೀರು ಸಿಕ್ಕಿತು. ಆದರೆ ಕೃಷಿಗೆ ಅದೂ ಸಾಲದು. ಅದರ ಪಕ್ಕ 7ನೇ ಸುರಂಗ ಕೊರೆದಾಗ ಉತ್ತಮ ನೀರಿನ ಸೆಲೆ ಸಿಕ್ಕಿತು. ಅದರಿಂದ ನೀರು ಸಂಗ್ರಹಿಸಲು ಮಣ್ಣಿನ ಕೆರೆ ನಿರ್ಮಿಸಿದರು. ಭತ್ತ, ಅಡಕೆ, ತೆಂಗು, ಬಾಳೆ ನೆಟ್ಟರು. ಆ ಮೂಲಕ ಯಶಸ್ವೀ ಜಲಸಾಧಕ, ಕೃಷಿಕರೆನಿಸಿಕೊಂಡವರಿಗೆ ಹಿಂದೆ 2018ರ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಲಾಗಿತ್ತು.

- Advertisement -
spot_img

Latest News

error: Content is protected !!