ರಾಮನಗರ : ಬೆಂಗಳೂರಿನ ಪಾದರಾಯನಪುರದಿಂದ ರಾಮನಗರದ ಪೊಲೀಸರಿಗೆ ಕೊರೊನಾ ಭೀತಿ ಎದುರಾಗಿದೆ. ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 126 ಜನರನ್ನು ಈವರೆಗೆ ಬಂಧಿಸಿದ್ದು, ಈವರೆಗೆ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇವರನ್ನು ಜೈಲಿಗೆ ಶಿಫ್ಟ್ ಮಾಡುವ ವೇಳೆ ಸುಮಾರು 177 ಮಂದಿ ಪೊಲೀಸರು ಹಾಜರಿದ್ದರು. ಹೀಗಾಗಿ ಇವರಿಗೂ ಸೋಂಕು ತಟ್ಟಿರುವ ಸಾಧ್ಯತೆ ಇದೆ.
ಪಾದರಾಯನಪುರ ಗಲಾಟೆ ಪ್ರಕರಣದ ಆರೋಪಿಗಳನ್ನು ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲು ಚಿಂತಿಸಲಾಗಿತ್ತು. ಆದರೆ, ಅಲ್ಲಿ ಸಾವಿರಾರು ಖೈದಿಗಳು ಇರುವ ಕಾರಣ ಅಲ್ಲಿಗೆ ಶಿಫ್ಟ್ ಮಾಡುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದು, ರಾಮನಗರ ಜೈಲಿನಲ್ಲಿದ್ದ 170 ಮಂದಿ ಕೈದಿಗಳನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ಇನ್ನು ಪಾದರಾಯನಪುರದಲ್ಲಿ ಬಂಧಿಸಿದ್ದ ಒಟ್ಟು1 26 ಮಂದಿ ಆರೋಪಿಗಳನ್ನು ಮೊದಲಿಗೆ ಆಡುಗೋಡಿಯ ಮಂಗಳ ಕಲ್ಯಾಣಮಂಟಪಕ್ಕೆ ಕರೆದೊಯ್ದು, ಅಲ್ಲಿ ಎಲ್ಲರ ರಕ್ತದ ಮಾದರಿ ಹಾಗೂ ಗಂಟಲು ದ್ರವದ ಸ್ಯಾಂಪಲ್ ಸಂಗ್ರಹಿಸಿ ವೈದ್ಯಕೀಯ ತಪಾಸಣೆಗೆ ಗುರಿಪಡಿಸಲಾಗಿತ್ತು. ಆ ಬಳಿಕ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರಿಸಲಾಗಿತ್ತು. ಈ ಆರೋಪಿಗಳ ಸ್ಥಳಾಂತರದ ವೇಳೆ ಸುಮಾರು 177 ಮಂದಿ ಪೊಲೀಸರು ಕಾರ್ಯನಿರ್ವಹಿಸಿದ್ದರು. ಈ ಆರೋಪಿಗಳ ವೈದ್ಯಕೀಯ ವರದಿ ಪೈಕೆ ಕೆಲವರ ವರದಿ ನಿನ್ನೆ ಬಂದಿದ್ದು, ಇದರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ಹಲವರ ಆರೋಗ್ಯ ವರದಿ ಇಂದು ಕೈಸೇರುವ ಸಾಧ್ಯತೆ ಇದೆ. ಇಬ್ಬರಿಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ 177 ಪೊಲೀಸರು, ಅವರ ಕುಟುಂಬಸ್ಥರು, 35 ಮಂದಿ ಜೈಲು ಸಿಬ್ಬಂದಿ ಹಾಗೂ ಕುಟುಂಬಸ್ಥರಲ್ಲಿ ಸೋಂಕು ತಗುಲುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ.
ಇನ್ನು ರಾಮನಗರದ ಜೈಲಿನಲ್ಲಿರುವ ಇಬ್ಬರಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಕೂಡಲೇ ಅವರನ್ನು ಕಳೆದ ರಾತ್ರಿಯೇ ವಿಕಿಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನುಳಿದ ಕೈದಿಗಳನ್ನು ಸ್ಥಳಾಂತರ ಮಾಡಬೇಕಾ ಅಥವಾ ಮುಂದೆ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದಾರೆ