ಕಡಬ: ಕೆಲ ದಿನಗಳ ಹಿಂದೆ ಉಪ್ಪಿನಂಗಡಿಯ ವರ್ತಕರೊಬ್ಬರು ಅಪರಿಚಿತ ವ್ಯಕ್ತಿಗೆ ಒಟಿಪಿ ಸಂಖ್ಯೆ ನೀಡಿ ಬ್ಯಾಂಕ್ ನಿಂದ ಹಣ ಕಳೆದುಕೊಂಡ ಬೆನ್ನಲ್ಲೇ ಇದೀಗ ಕಡಬದ ವ್ಯಕ್ತಿಯೋರ್ವರು ಅಪರಿಚಿತರಿಗೆ ಒಟಿಪಿ ಸಂಖ್ಯೆ ನೀಡಿ ಒಂದು ಲಕ್ಷ ರೂ.ವನ್ನು ಕಳೆದುಕೊಂಡು ಮೋಸ ಹೋಗಿದ್ದಾರೆ.
ಕಡಬ ನಿವಾಸಿ ಧರಣೇಂದ್ರ ಜೈನ್ ಎಂಬವರ ಮೊಬೈಲ್ ಸಂಖ್ಯೆಗೆ ಎಪ್ರಿಲ್ 10 ರಂದು ಸಂಜೆ 5.30 ಗಂಟೆಗೆ ಅಪರಿಚಿತ ವ್ಯಕ್ತಿಯು ಕರೆಮಾಡಿ ತಾನು ಏರ್ಟೆಲ್ ಕಸ್ಟಮರ್ ಕೇರ್ ನಿಂದ ಕರೆಮಾಡುವುದಾಗಿ ಪರಿಚಯಿಸಿಕೊಂಡಿದ್ದು, ನಿಮ್ಮ ಸಿಮ್ ಆ್ಯಕ್ಟಿವೇಟ್ ಮಾಡಬೇಕಾಗಿದ್ದು, ಅದಕ್ಕಾಗಿ ಒಟಿಪಿ ನಂಬರ್ ಕಳುಹಿಸಿ ಕೊಡುತ್ತೇವೆ ಎಂದು ತಿಳಿಸಿದಾಗ ಧರಣೇಂದ್ರ ಜೈನ್ ರ ಪುತ್ರ ಒಟಿಪಿ ಸಂಖ್ಯೆಯನ್ನು ಅಪರಿಚಿತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ತಕ್ಷಣವೇ 50 ಸಾವಿರ, ನಂತರ ರೂ, 24900 ಹಾಗೂ 25000 ಹಣವನ್ನು ಬ್ಯಾಂಕ್ ಖಾತೆಯಿಂದ ಡ್ರಾ ಮಾಡಲಾಗಿದೆ. ಈ ಮೂಲಕ ಒಟ್ಟು 99900 ರೂ. ಗಳನ್ನು ಕಳೆದುಕೊಂಡು ತಾನು ಮೋಸ ಹೋಗಿರುವುದಾಗಿ ಇದೀಗ ಕಡಬ ಠಾಣೆಗೆ ದೂರು ನೀಡಿದ್ದಾರೆ.
ಅಪರಿಚಿತ ಕರೆಗೆ ಉತ್ತರಿಸುವ ಮುನ್ನ ಏನು ಮಾಡಬೇಕು..?
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ರುಕ್ಮನಾಯ್ಕ್, ಇತ್ತೀಚಿನ ದಿನಗಳಲ್ಲಿ ಕೊರೋನಾ (ಕೋವಿಡ್ -19) ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ಬಗ್ಗೆ ಮಾನ್ಯ ಪ್ರಧಾನ ಮಂತ್ರಿಗಳ, ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ಖಾತೆಗೆ ಹಣ ಕಳುಹಿಸುವರೇ ಹಾಗೂ ಸಾರ್ವಜನಿಕವಾಗಿ ಖಾಸಗಿ ಸಂಸ್ಥೆಗಳು ಪರಿಹಾರಕ್ಕಾಗಿ ಅಥವಾ ದೇಣಿಗೆ ನೀಡಬೇಕೆಂದು ನಕಲಿ ಸಂಸ್ಥೆಗಳು ಕರೆ ಅಥವಾ ಸಾಮಾಜಿಕ ಜಾಲತಾಣಗಳ ಮುಖಾಂತರ ಕಾರ್ಯಾಚರಿಸುತ್ತಿವೆ.
ಇಂತಹ ಸಂಸ್ಥೆಗಳು ತಮ್ಮ ಖಾತೆಯಲ್ಲಿರುವ ಹಣದ ಬಗ್ಗೆ ಮಾಹಿತಿ ನೀಡಿ ಎಂದು ನಕಲಿ ಕರೆಗಳು ಬರುತ್ತಿದ್ದು, ಅಂತಹ ಕರೆಗಳನ್ನು ನಿರ್ಲಕ್ಷಿಸಬೇಕು, ಯಾವುದೇ ಕಾರಣಕ್ಕೂ ನಕಲಿ ಕರೆಗಳನ್ನು ಸ್ವೀಕರಿಸಬಾರದು ಹಾಗೂ ತಮ್ಮ ಬ್ಯಾಂಕ್ ಅಕೌಂಟ್ ಗೆ ಸಂಬಂಧಿಸಿದಂತಹ ಏಟಿಎಂ ಪಿನ್ ನಂಬರ್ , ಏಟಿಎಂ 16 ಡಿಜಿಟ್ ನಂಬರ್, ಸಿವಿವಿ/ಸಿವಿಸಿ ನಂಬರ್ ,ಒಟಿಪಿ ನಂಬರ್ , ಬ್ಯಾಂಕ್ ಅಕೌಂಟ್ ನಂಬರ್ , ಐಎಫ್ಸಿಸಿ ನಂಬರ್, ಎಂಐಸಿಆರ್ ನಂಬರ್ ಮುಂತಾದ ಗೌಪ್ಯ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಯಾರಿಗೂ ನೀಡಬಾರದು. ಈ ಬಗ್ಗೆ ಏನಾದರೂ ಸಂದೇಹಗಳಿದ್ದಲ್ಲಿ ಸಂಬಂಧಿಸಿದ ಬ್ಯಾಂಕ್ ಗಳಿಗೆ ಅಥವಾ ತಮ್ಮ ತಮ್ಮ ಬೀಟ್ ಪೊಲೀಸರಲ್ಲಿ ಹಾಗೂ ಕಡಬ ಪೊಲೀಸ್ ಉಪ ನಿರೀಕ್ಷಕರಲ್ಲಿ ದೂರವಾಣಿ ಅಥವಾ ಠಾಣೆಗೆ ಹಾಜರಾಗಿ ಮಾಹಿತಿ ನೀಡತಕ್ಕದ್ದು ಎಂದು ತಿಳಿಸಿದ್ದಾರೆ.