ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಅಂಗಾಂಗ ಸಾಗಣೆ ಮಾಡಿ ಸೂಕ್ತ ಸಮಯಕ್ಕೆ ಅಂಗಾಂಗ ಕಸಿಯನ್ನು ಯುವಕನೋರ್ವನಿಗೆ ಯಶಸ್ವಿಯಾಗಿ ನೆರವೇರಿಸಿ ರೋಗಿಗೆ ಜೀವದಾನ ನೀಡಲಾಗಿದೆ.
ಶುಕ್ರವಾರ ರಾತ್ರಿ ಬೆಂಗಳೂರಿನ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣಕ್ಕೆ ಯಕೃತ್‌ನ್ನು ಮೆಟ್ರೋ ಬೋಗಿಯ ಮೂಲಕ ತಂದು ಯಕೃತ್ ಕಸಿ ನೆರವೇರಿಸಲಾಯಿತು.31 ಕಿಲೋ ಮೀಟರ್ ದೂರದ ಪ್ರಯಾಣದಲ್ಲಿ ಮೆಟ್ರೋ ರೈಲು ಎಂದಿನಂತೆ 55 ನಿಮಿಷಗಳಲ್ಲಿ 32 ನಿಲ್ದಾಣಗಳನ್ನು ದಾಟಿ ರಾಜರಾಜೇಶ್ವರಿ ನಗರ ತಲುಪಿತ್ತು.
ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದ 24 ವರ್ಷದ ಯುವಕನ ಹೃದಯ, ಯಕೃತ್ ಮತ್ತಿತರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದು, ರಾಜರಾಜೇಶ್ವರಿ ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ 30 ವರ್ಷದ ರೋಗಿಯೊಬ್ಬರಿಗೆ ಯಕೃತ್ ಕಸಿ ನಡೆಸಲಾಗಿದೆ.
ಸಂಜೆಯ ಸಂಚಾರ ದಟ್ಟಣೆಯಿಂದಾಗಿ ರಸ್ತೆ ಮಾರ್ಗದ ಮೂಲಕ ಯಕೃತ್ ಸಾಗಣೆಗೆ ಕನಿಷ್ಟ 3ರಿಂದ 4 ಗಂಟೆಗಳ ಕಾಲ ತಗಲುತ್ತಿದ್ದ ಮತ್ತು ಈ ಅವಧಿಯಲ್ಲಿ ಗ್ರೀನ್ ಕಾರಿಡಾರ್ ಮಾಡುವುದು ಕಠಿಣವಾಗಿದ್ದರಿಂದ ಮೆಟ್ರೋ ರೈಲಿನ ಮೂಲಕ ಯಕೃತ್ ಸಾಗಿಸುವ ನಿರ್ಧಾರಕ್ಕೆ ಬರಲಾಗಿತ್ತು.
ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣದಿಂದ ಯಕೃತ್‌ನ್ನು ಗ್ರೀನ್ ಕಾರಿಡಾರ್ ಮೂಲಕ 2.5 ಕಿಲೋ ಮೀಟರ್ ದೂರದ ಸ್ಪರ್ಶ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಮೆಟ್ರೋ ತನ್ನ ನೇರಳೆ ಮಾರ್ಗದ ಕೊನೆಯ ಬೋಗಿಯನ್ನು ಇದಕ್ಕಾಗಿಯೇ ಮೀಸಲಿಟ್ಟಿತ್ತು.


