ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದು, ಇದೀಗ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ದರ್ಶನ್ ಅವರಿಗಾಗಿ ಜೈಲಿನ ನಿಯಮಗಳನ್ನು ತೂರಲಾಯಿತೇ ಎನ್ನುವಂತಹ ಪ್ರಶ್ನೆ ಹಾಗೂ ಚರ್ಚೆಗಳು ನಡೆಯುತ್ತಿವೆ.
ಇದಕ್ಕೆ ಮುಖ್ಯ ಕಾರಣ ದರ್ಶನ್ ಅವರು ಜೈಲಿನಲ್ಲಿ ಪದೇ ಪದೇ ತನ್ನ ಸ್ನೇಹಿತರನ್ನ ಹಾಗೂ ಕುಟುಂಬದವರನ್ನು ಭೇಟಿಯಾಗುತ್ತಿರುವುದು. ಕಾರಾಗೃಹ ಕಾಯ್ದೆ 1894 ಸೆಕ್ಷನ್ 56 ಅಡಿಯಲ್ಲಿ ಓರ್ವ ಜೈಲು ಬಂಧಿಯು ವಾರದಲ್ಲಿ ಒಮ್ಮೆ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ಭೇಟಿ ಮಾಡಬಹುದು. ಅಲ್ಲದೆ ವಿಡೀಯೋ ಕಾನ್ಪರೆನ್ಸ್ ಮುಖಾಂತರವೂ ಜೈಲು ಬಂಧಿಗಳು ವಾರದಲ್ಲಿ ಎರಡು ಬಾರಿ ಕುಟುಂಬಸ್ಥರು ಅಥವಾ ಸ್ನೇಹಿತರ ಜೊತೆ ಮಾತನಾಡಲು ಅವಕಾಶವಿದೆ. ಕಾರಾಗೃಹ ಕಾಯ್ದೆ 1894 ಸೆಕ್ಷನ್ 57 ಅಡಿಯಲ್ಲಿ ಜೈಲಿನ ಸೂಪರಿಂಡೆಂಟ್ ವಿಶೇಷ ಹಾಗೂ ಅವಶ್ಯಕ ಸಂದರ್ಭದಲ್ಲಿ ಹೆಚ್ಚಿನ ಬಾರಿ ಭೇಟಿಗೆ ಅವಕಾಶ ನೀಡಬಹುದು. ಕಾರಾಗೃಹ ಕಾಯ್ದೆ 1894 ಸೆಕ್ಷನ್ 58 ಅಡಿಯಲ್ಲಿ ಜೈಲು ಬಂಧಿ ಪತ್ರ ಬರೆಯಲು, ಪತ್ರ ಸ್ವೀಕರಿಸಲು ಅನುಮತಿ ಹೊಂದಿರುತ್ತಾರೆ. ರಜಾ ದಿನಗಳಲ್ಲಿ ಯಾರಿಗೂ ಭೇಟಿಗೆ ಅವಕಾಶ ಇರುವುದಿಲ್ಲ.
ಆದರೆ ನಟ ದರ್ಶನ್ ವಿಚಾರದಲ್ಲಿ ಇದ್ಯಾವುದೂ ಕೂಡ ಲೆಕ್ಕಕ್ಕೇ ಇಲ್ಲ ಎನ್ನುವಂತಾಗಿದೆ. ದರ್ಶನ್ ಜೈಲು ಸೇರಿ ಕೆಲವೇ ದಿನಗಳಲ್ಲಿ ಹಲವರ ಭೇಟಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ತಾಯಿ ಮೀನಾ ತೂಗುದೀಪ, ಸೋದರ ದಿನಕರ್, ನಟ ವಿನೋದ್ ಪ್ರಭಾಕರ್, ರಕ್ಷಿತಾ ಪ್ರೇಮ್, ಪ್ರೇಮ್ ಭೇಟಿಗೆ ಅವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.