
ಬೆಂಗಳೂರು: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಸರ್ಜನೆಗೆ ತಡೆ ಒಡ್ಡಲು ಇಲಾಖಾ ಕಾರ್ಯದರ್ಶಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಮಣ್ಣಿನ ಗಣಪತಿ ಮೂರ್ತಿ ಪೂಜಿಸಲು ಸಚಿವ ಖಂಡ್ರೆ ಜನರಿಗೆ ಮನವಿ ಮಾಡಿದ್ದು, ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು ಮತ್ತು ಸಾಗಾಟಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೆರವು ಪಡೆದು ತಡೆ ಹಾಕಲು ಸೂಚನೆ ನೀಡಿದ್ದಾರೆ.
ಪಿಒಪಿ ಗಣಪತಿ ಮೂರ್ತಿಗಳಿಂದ ಜಲ ಮೂಲಗಳ ಮಾಲಿನ್ಯದ ಜೊತೆಗೆ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಉಂಟಾಗುವ ಕಾರಣ ಜಲ ಮಾಲಿನ್ಯ ತಡೆ ಕಾಯಿದೆ 1974ರ ಕಲಂ 33(ಎ) ಅಡಿಯಲ್ಲಿ ವಿಸರ್ಜನೆ ನಿಷೇಧ ಮಾಡಲು ಸೂಚನೆ ನೀಡಲಾಗಿದೆ.
ಇದೇ ವೇಳೆ, ಪಿಒಪಿಯ ದೊಡ್ಡ ಗಣಪತಿ ಕೂರಿಸುವ ಪೈಪೋಟಿ ಇದೆ, ಆದರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜಾಗೃತಿ ಇದ್ದು, ಈ ಜಿಲ್ಲೆಗಳಲ್ಲಿ ಶೇಕಡಾ 90ರಷ್ಟು ಮಣ್ಣಿನ ಗಣಪತಿ ಕೂರಿಸುತ್ತಾರೆ ಎಂದು ಸಚಿವ ಖಂಡ್ರೆ ಹೇಳಿದ್ದಾರೆ.


