ಬೆಂಗಳೂರು: ತಮ್ಮ ವೈವಾಹಿಕ ಬದುಕಿಗೆ ಅಂತ್ಯಹಾಡಿರುವ ಚಂದನ್ ಶೆಟ್ಟಿ – ನಿವೇದಿತಾ ಗೌಡ ಅವರು ವಿಚ್ಚೇದನ ಪಡೆದ ಬಳಿಕ ಮೊದಲ ಬಾರಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಎಲ್ಲದಕ್ಕೂ ಸ್ಷಪ್ಟನೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ‘ನನ್ನ ಹಾಗೂ ನಿವೇದಿತಾ ಅವರ ಅಲೋಚನೆಗಳು ಮತ್ತು ಜೀವನ ಶೈಲಿ ಬೇರೆಬೇರೆ. ಜೀವನ ಅಂದರೆ ಏನು ಅಂಥ ಅರ್ಥ ಮಾಡಿಕೊಳ್ಳುವ ವ್ಯಾಖ್ಯಾನ ನಮ್ಮಿಬ್ಬರ ನಡುವೆ ಭಿನ್ನವಾಗಿದೆ. ಇದರಿಂದ ಹೊಂದಾಣಿಕೆ ಆಗಿಲ್ಲ. ನಾವಿಬ್ಬರು ಈ ಬಗ್ಗೆ ಎಷ್ಟೋ ಸಲ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ. ನಾವಿಬ್ಬರು ಬಲವಂತವಾಗಿ ಈ ರೀತಿಯಾಗಿರಲು ಆಗಲ್ಲ. ಮಾನಸಿಕವಾಗಿ ನೋವುಪಟ್ಟುಕೊಂಡು ಇರುವುದು ಸರಿಯಲ್ಲ ಅನ್ನಿಸಿತು. ಇದರಿಂದಾಗಿ ನಾವಿಬ್ಬರೂ ಒಮ್ಮತ, ಪರಸ್ಪರ ಗೌರವದಿಂದ ಒಪ್ಪಿಕೊಂಡು ಕಾನೂನಾತ್ಮಕವಾಗಿ ಈ ನಿರ್ಧಾರವನ್ನು ಮಾಡಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ದ್ವೇಷ, ವೈಮನಸ್ಸು ಇಲ್ಲ,’ ಎಂದು ಚಂದನ್ ಹೇಳಿದ್ದಾರೆ.
ನಟಿ ನಿವೇದಿತಾ ಗೌಡ ಪ್ರತಿಕ್ರಯಿಸಿ, ‘ಪ್ರತಿಯೊಬ್ಬರು ಈ ಸಂದರ್ಭದಲ್ಲಿ ನಮ್ಮ ಜೊತೆ ನಿಂತಿದ್ದಕ್ಕೆ ಧನ್ಯವಾದ. ನಾವಿಬ್ಬರು ಹೊಂದಾಣಿಯಿಂದಾಗಿ ಇರಲಿಲ್ಲ. ಈ ಕಾರಣದಿಂದ ನಾವಿಬ್ಬರು ವಿಚ್ಚೇದನ ಪಡೆದಿದ್ದೇವೆ ಅಷ್ಟೇ ಅದು ಬಿಟ್ಟು ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು,’ ಎಂದಿದ್ದಾರೆ.
ಚಂದನ್ ಮಾತನಾಡಿ, ನಿವೇದಿತಾ ಅವರಿಗೆ ನಾನು ಯಾವುದೇ ರೀತಿಯ ಜೀವನಾಂಶವನ್ನು ನೀಡಿಲ್ಲ. ಹಾಗೂ ನಿವೇದಿತಾ ಕೂಡ ನನ್ನಿಂದ ಯಾವುದೇ ರೀತಿಯ ಜೀವನಾಂಶದ ಬೇಡಿಕೆ ಇಟ್ಟಿಲ್ಲ. ಇದಲ್ಲದೆ ಮಕ್ಕಳು ಮಾಡಿಕೊಳ್ಳುವ ವಿಚಾರದಲ್ಲಿ ನಮ್ಮಿಬ್ಬರ ನಡುವೆ ಮನಸ್ತಾಪ ಉಂಟಾಯಿತು ಎಂದು ವದಂತಿ ಹರಿದಾಡಿತ್ತು. ಈ ವಿಚಾರ ಕೂಡ ಸುಳ್ಳು. ನಾವಿಬ್ಬರು ಸಿನಿಮಾರಂಗದಲ್ಲಿದ್ದೇವೆ. ಇಬ್ಬರಿಗೂ ಒಳ್ಳೆಯ ಕೆರಿಯರ್ ಇದೆ. ಇನ್ನು ಮೂರನೇ ವ್ಯಕ್ತಿಯ ಜೊತೆ ನಿವೇದಿತಾ ಅವರೊಂದಿಗೆ ಸಂಬಂಧ ಕಲ್ಪಿಸುತ್ತಿರುವುದು ನನಗೆ ತುಂಬಾ ಬೇಸರ ತರಿಸಿದೆ. ಆ ವ್ಯಕ್ತಿಯ ಮನೆಗೆ ನಾನು ಕೂಡ ಹೋಗಿದ್ದೇನೆ. ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್. ಅವರ ಕುಟುಂಬ ಒಳ್ಳೆಯ ಹಸೆರಿರುವ ಕುಟುಂಬ. ಆ ವ್ಯಕ್ತಿಯ ಜೊತೆ ನಿವೇದಿತಾ ಹೆಸರು ಸೇರಿಸಿ ಹೇಳುತ್ತಿರುವುದು ಸರಿಯಲ್ಲ,’ ಎಂದಿದ್ದಾರೆ.
ನಿವೇದಿತಾ ಗೌಡ ಮಾತನಾಡಿ, ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್, ಅವರು ನನಗೆ ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾರೆ. ಒಂದು ಟ್ರೆಂಡಿಂಗ್ ಸಾಂಗ್ ಹಾಕಿ ಪೋಸ್ಟ್ ಹಾಕಿದರೆ ಅದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸುವುದು ಸರಿಯಲ್ಲ. ಇದರಿಂದ ಅವರ ಫ್ಯಾಮಿಲಿಗೂ ನೋವಾಗಿದೆ. ಈ ಬಗ್ಗೆ ಅವರ ಬಳಿ ಹಾಗೂ ಅವರ ಪತ್ನಿ ಬಳಿ ನಾನು ಮಾತನಾಡಿದ್ದೆ. ಅವರಿಬ್ಬರೂ ನನಗೆ ತುಂಬಾ ಬೆಂಬಲವಾಗಿ ನಿಂತರು. ಗೊತ್ತಿಲ್ಲದೆ ಯಾವುದೇ ರೀತಿಯ ಪೋಸ್ಟ್ ಗೆ ಈ ರೀತಿಯ ಪ್ರತಿಕ್ರಿಯೆ ನೀಡುವುದರಿಂದ ಮನಸ್ಸಿಗೆ ತುಂಬಾ ನೋವು ಆಗುತ್ತದೆ ಎಂದಿದ್ದಾರೆ.
ನಂತರದಲ್ಲಿ ಚಂದನ್ ಮಾತನಾಡಿ, ‘ನಾನು ಡಿಫ್ರೆಶನ್ ನಲ್ಲಿದ್ದೇನೆ ಎನ್ನುವ ವಿಡಿಯೋವನ್ನು ವೈರಲ್ ಮಾಡಲಾಗಿದೆ. 2023(29 ಆಗಸ್ಟ್) ಸಿನಿಮಾದ ಪ್ರಚಾರಕ್ಕೆ ಮಾಡಿದ ವಿಡಿಯೋ ಅದು. ಅದನ್ನು ಕಟ್ ಮಾಡಿ ಈ ವಿಚಾರಕ್ಕೆ ಕನೆಕ್ಟ್ ಮಾಡಿ ವೈರಲ್ ಮಾಡಲಾಗುತ್ತಿದೆ,’ ಎಂದಿದ್ದಾರೆ.