ಕೊಯಿಲ: ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು, ಸಂಪ್ಯಡಿ ಭಾಗದ ಜನತೆ ಹಲವಾರು ವರ್ಷಗಳಿಂದ ನೆಟ್ ವರ್ಕ್ ಸಮಸ್ಯೆಯನ್ನು ಸಹಿಸುತ್ತಲೇ ಬಂದಿದ್ದಾರೆ. ಸರಿಯಾಗಿ ಯಾವುದೇ ಸಿಮ್ ನೆಟ್ ವರ್ಕ್ ಕೂಡಾ ಸಿಗದೇ ಇರುವುದರಿಂದ ಹಲವು ಟೆಲಿಕಾಂ ಅಧಿಕಾರಿಗಳನ್ನೂ, ಸ್ಥಳೀಯ ಶಾಸಕರನ್ನೂ ಭೇಟಿ ಮಾಡಿ ಮನವಿ ನೀಡಿದ್ದರು. ಆದರೆ ಯಾವುದೇ ರೀತಿಯ ಸಕಾರತ್ಮಕ ಸ್ಪಂದನೆ ದೊರೆತಿರಲಿಲ್ಲ.
ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದ ಸಮಯದಲ್ಲಿ ದೂರವಾಣಿ ಕರೆ ಮಾಡಲು ಸರಿಯಾಗಿ ನೆಟ್ ವರ್ಕ್ ಸಿಗದೇ ಅಗತ್ಯ ಸಮಯದಲ್ಲಿ ಜನರನ್ನೂ ಸಂಪರ್ಕಿಸುವುದು ಕಷ್ಟಕರವಾಗಿತ್ತು. ಇನ್ನು ಶಾಲಾ ಮಕ್ಕಳಿಗೆ ಆನ್ ಲೈನ್ ನಲ್ಲಿ ತರಗತಿಗಳು ಶುರುವಾದಾಗ ಸರಿಯಾದ ಇಂಟೆರ್ ನೆಟ್ ಸೌಲಭ್ಯಕ್ಕಾಗಿ ಮಕ್ಕಳು ಮನೆಯ ಸಮೀಪದ ಗುಡ್ಡೆಗಳನ್ನು ಸುತ್ತಿ ಸುತ್ತಿ ಸುಸ್ತಾದದ್ದಷ್ಟೇ ಬಂತು. 4ಜಿ ಯುಗದಲ್ಲಿ ಸರಿಯಾದ ಇಂಟರ್ ನೆಟ್ ಅನ್ನೇ ನೋಡಲಾಗದ ಸ್ಥಿತಿ ಈ ಪರಿಸರದವರದ್ದು.

ಕೊನೆಗೂ ಸ್ಪಂದಿಸಿದ ಏರ್ ಟೆಲ್ ಸಂಸ್ಥೆ:
ಜನಪ್ರತಿನಿಧಿಗಳಿಗೆ ಮತ್ತು ಟೆಲಿಕಾಂ ಸಂಸ್ಥೆಗಳಿಗೆ ಹಲವು ಬಾರಿ ನೆಟ್ವರ್ಕ್ ಸಮಸ್ಯೆಯ ಕುರಿತು ದೂರು ನೀಡಿ ರೋಸಿ ಹೋಗಿದ್ದ ಈ ಭಾಗದ ಜನರಿಗೆ ಸಿಹಿ ಸುದ್ದಿ ಎಂಬಂತೆ ಇದೀಗ ಸಂಪ್ಯಾಡಿ ಎಂಬಲ್ಲಿ ಏರ್ ಟಲ್ ಟವರ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಶೀಘ್ರದಲ್ಲೇ ಟವರ್ ನಿರ್ಮಾಣ ಪೂರ್ತಿಯಾಗಲಿದ್ದು, ನಂತರ ಯಾವುದೇ ರೀತಿಯ ರೀತಿಯ ನೆಟ್ವರ್ಕ್ ಸಮಸ್ಯೆ ಇರುವುದಿಲ್ಲ ಎಂದು ಏರ್ಟೆಲ್ ಸಂಸ್ಥೆಯ ಮನೋಜ್ ಭರವಸೆ ನೀಡಿದ್ದಾರೆ.