Sunday, May 5, 2024
Homeಕರಾವಳಿಗರ್ಭಿಣಿ ಮಹಿಳೆ& ಕುಟುಂಬಸ್ಥರಿಗೆ ಮಾನಸಿಕ ಹಿಂಸೆ ಆರೋಪ : ಹೆರಿಗೆ ಮಾಡಿಸಲು ನಿರಾಕರಿಸಿದ ಬೆಳ್ತಂಗಡಿ ಸಾರ್ವಜನಿಕ...

ಗರ್ಭಿಣಿ ಮಹಿಳೆ& ಕುಟುಂಬಸ್ಥರಿಗೆ ಮಾನಸಿಕ ಹಿಂಸೆ ಆರೋಪ : ಹೆರಿಗೆ ಮಾಡಿಸಲು ನಿರಾಕರಿಸಿದ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ.

spot_img
- Advertisement -
- Advertisement -

ಬೆಳ್ತಂಗಡಿ : ಹೆರಿಗೆಗಾಗಿ ಬಂದ ಬಡಕುಟುಂಬದ ಮಹಿಳೆ ಹಾಗೂ ಕುಟುಂಬಸ್ಥರೊಂದಿಗೆ ಅಮಾನವೀಯವಾಗಿ ವರ್ತಿಸಿ ಮಾನಸಿಕ ಹಿಂಸೆ ನೀಡಿ, ಹೆರಿಗೆ ಮಾಡಿಸಲು ನಿರಾಕರಿಸಿರುವ ಬಗ್ಗೆ ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿಗೆ ದೂರು ನೀಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜದ ಇಬ್ರಾಹಿಂ ಎಂಬವರ ಮಗ ಪಿ.ಕಾಸಿಂ ಎಂಬವರು ತನ್ನ ಮಗಳಿಗೆ ಹಾಗೂ ಕುಟುಂಬದವರಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಿಂದ ಆಗಿರುವ ತೊಂದರೆಯನ್ನು ಬೆಳ್ತಂಗಡಿ ವೈದ್ಯಾಧಿಕಾರಿ (ತಾಲೂಕು ಆರೋಗ್ಯಾಧಿಕಾರಿ) ಗೆ ಲಿಖಿತ ರೂಪದಲ್ಲಿ 19/3/2022 ರಂದು ನೀಡಿದ್ದಾರೆ. ಇದರ ಪ್ರತಿ ಮಹಾ ಎಕ್ಸ್‌ಪ್ರೆಸ್‌ ವೆಬ್ ಸೈಟ್ ಗೆ ಲಭ್ಯವಾಗಿದೆ.

ದೂರಿನ ವಿವರ : ದಿನಾಂಕ 17/03/2022 ರಂದು ಗುರುವಾರ ರಾತ್ರಿ ಸುಮಾರು 11:30 ಸಮಯಕ್ಕೆ ನನ್ನ ಮಗಳಾದ ಸುಮಯ್ಯ ಎಂಬವಳನ್ನು ಹೆರಿಗೆಗಾಗಿ ಬೆಳ್ತಂಗಡಿ ಸಮುದಾಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ನನ್ನ ಮಗಳನ್ನು ಹೆರಿಗೆ ಕೊಠಡಿಗೆ ಕರೆದುಕೊಂಡು ಹೋಗಿ ಡಾಕ್ಟರ್ ಗಳು ಯಾರು ಹತ್ತಿರ ಬಾರದೆ ಒಂದೆರಡು ಆರೋಗ್ಯ ಸಹಾಯಕಿಯರು ಪರೀಕ್ಷೆ ಮಾಡುವ ನಾಟಕ ಮಾಡಿ ಗರ್ಭಿಣಿ ಮಹಿಳೆಯೊಂದಿಗೆ ಡೈರೆಕ್ಟ್ ಆಗಿ “ನಾವು ವಾಹನ ಕೊಡುತ್ತೇವೆ ನೀವು ಮಂಗಳೂರಿಗೆ ಹೋಗಿ” ಎಂದು ಪ್ರಾರಂಭದಲ್ಲಿಯೇ ಹೇಳಿದರು.

ನಂತರ ಮಹಿಳೆಯ ಗಂಡನನ್ನು ಹಾಗೂ ಕುಟುಂಬಸ್ಥರೊಂದಿಗೆ ಗರ್ಭಿಣಿಗೆ ಇಲ್ಲಿ ಹೆರಿಗೆ ಮಾಡಿಸಲು ಸಾಧ್ಯವಿಲ್ಲ. ಅವರಿಗೆ ವಿಪರೀತ ನೀರು ಹೋಗಿದೆ ಮಗು ಉಸಿರು ಕಟ್ಟಿ ಸಾಯಬಹುದು ತಾಯಿಗೂ ಅಪಾಯವಿದೆ. ನಾವು ವಾಹನದ ವ್ಯವಸ್ಥೆ ಮಾಡಿಕೊಡುತ್ತೇವೆ ಏನೂ ಮಾಡುತ್ತೀರಿ ಬೇಗ ಹೇಳಿ ಎಂದು ಹೇಳಿದರು. ಇಲ್ಲ ಮೇಡಂ ನೀವು ಪ್ರಯತ್ನ ಮಾಡಿ ನಾವು ಬೇರೆ ಕಡೆಗೆ ಕರೆದುಕೊಂಡು ಹೋಗುವುದಿಲ್ಲ. ನಮ್ಮ ಜೊತೆ ಎರಡು ಸಣ್ಣ ಸಣ್ಣ ಮಕ್ಕಳು ಸಹ ಇದ್ದಾರೆ ಅವರನ್ನು ಕರೆದುಕೊಂಡು ಮಂಗಳೂರಿಗೆ ಹೋಗಲು ಕಷ್ಣವಾಗುತ್ತದೆ. ಸಾಧ್ಯವಾದಷ್ಟು ನೀವೇ ಪ್ರಯತ್ನಿಸಿ ಬೆಳಗ್ಗೆ ಬೇಕಾದ್ರೆ ನಾವು ಬೇರೆ ಕಡೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಕೇಳಿಕೊಂಡೆವು. ಯಾವುದಕ್ಕೂ ಕಿವಿಕೊಡದೆ ಏನ್ರೀ ನೀವು ತಾಯಿ ಮಗುವನ್ನು ಕೊಲ್ಲೋದಕ್ಕೆ ಇಲ್ಲಿಗೆ ತಂದಿದ್ದೀರಾ ನಿಮಗೆ ಹೇಳಿದರೆ ಅರ್ಥವಾಗುತ್ತಿಲ್ಲ ನಿಮಗೇನು ಜವಾಬ್ದಾರಿ ಇಲ್ವಾ ,ಮಗು ಉಸಿರು ಕಟ್ಟಿ ಸಾಯುತ್ತದೆ. ತಾಯಿಗೂ ಅಪಾಯವಿದೆ ಮಗು ತಾಯಿಯ ಹೊಟ್ಟೆಯಲ್ಲಿ ಮಲ ವಿಸರ್ಜನೆ ಮಾಡುವ ಸಾಧ್ಯತೆ ಇದೆ .ನೀವು ಕರೆದುಕೊಂಡು ಹೋಗುತ್ತೀರಾ ಇಲ್ಲವಾ ಎಂದು ದಬಾಯಿಸಿ‌ ನಮ್ಮ ಮನಸ್ಸಿಗೆ ಭಯ ಹುಟ್ಟಿಸಿದರು.

ಅವರ ಚುಚ್ಚು ಮಾತುಗಳನ್ನು ಸಹಿಸದ ನಾವು ವಿಧಿಯಿಲ್ಲದೇ ಗರ್ಭಿಣಿ ಮಹಿಳೆ ಸುಮಯ್ಯಳನ್ನು ಕಣ್ಣೀರಿನೊಂದಿಗೆ ಡಿಸ್ಚಾರ್ಜ್ ಮಾಡಿಸಿಕೊಂಡು ಮಂಗಳೂರು ದೇರಳಕಟ್ಟೆ ಯೇನಪೋಯ ಖಾಸಗಿ ಆಸ್ಪತ್ರೆಗೆ ಸೇರಿಸಿದೆವು. ದೇವರ ದಯದಿಂದ ನನ್ನ ಮಗಳು ಸುಮಯ್ಯ ಮರುದಿನ ಬೆಳಿಗ್ಗೆ ನರ್ಮಾಲ್ ಆಗಿ ಗಂಡು ಮಗುವಿಗೆ ಜನ್ಮ ನೀಡಿರುತ್ತಾಳೆ. ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ. ಗರ್ಭಿಣಿ ಮಹಿಳೆಗೆ ಹಾಗೂ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಮಾಧಾನ ಪಡಿಸುವ ಬದಲು ಈ ರೀತಿ ಭಯ ಹುಟ್ಟಿಸಿ ಮಾನಸಿಕ ಹಿಂಸೆ ನೀಡಿರುವ ಬೇಜವಾಬ್ದಾರಿತನದ ಆರೋಗ್ಯ ಕಾರ್ಯಕರ್ತೆಯರ ಮೇಲೆ ಸೂಕ್ತ ಕ್ರಮ ಕೈಗೊಂಡು ಬಡರೋಗಿಗಳಿಗೆ ಮುಂದಿನ ದಿನಗಳಲ್ಲಿ ಅನ್ಯಾಯವಾಗದಂತೆ ಕ್ರಮ ಜರುಗಿಸಬೇಕೆಂದು ದೂರಿನ ಪತ್ರದಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಮೇಲೆ ಹಲವು ದೂರು : ಸರಕಾರಿ ಆಸ್ಪತ್ರೆಯ ಮೇಲೆ ಒಂದಲ್ಲ ಎರಡಲ್ಲ ಹಲವು ದೂರುಗಳು ಬರುತ್ತಿದ್ದರೂ ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿಯಾದ ಡಾ.ಕಲಾಮಧು ಅವರು ಈವರೆಗೆ ಯಾವುದೇ ಒಂದು ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ.

ಡಾ.ಕಲಾಮಧು ,ತಾಲೂಕು ವೈದ್ಯಾಧಿಕಾರಿ

ಕಳೆದ ಫೆ.17 ರಂದು ” ಮಹಾ ಎಕ್ಸ್‌ಪ್ರೆಸ್‌ ವೆಬ್ ಸೈಟ್” ಸುದ್ದಿ ತಂಡ “ಸಮಯವನ್ನು ಮರೆಯುವ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರು : ಬಾಗಿಲ‌ ಮುಂದೆ ಸಾಲುಗಟ್ಟಿ ನಿಂತ ಗರ್ಭಿಣಿ ಮಹಿಳೆಯರು ” ಎಂಬ ಶೀರ್ಷಿಕೆಯಡಿ ವರದಿ ಪ್ರಸಾರ ಮಾಡಿದ ಬಳಿಕ ಈ ವಿಚಾರವನ್ನು ತಾಲೂಕು ಆರೋಗ್ಯಾಧಿಕಾರಿ ತಮ್ಮ ಆಸ್ಪತ್ರೆಯ ವಾಟ್ಸಾಪ್ ಗ್ರೂಪ್ ಗೆ ಹಾಕಿದ್ದರು. ಇದನ್ನು ಗಮನಿಸಿದ ಮಹಿಳಾ ವೈದ್ಯರು ತಾಲೂಕು ಆರೋಗ್ಯಾಧಿಕಾರಿ ಕಛೇರಿಗೆ ಹೋಗಿ ಸರ್ ‘ನಾವು ಸಮಯಕ್ಕೆ ಸರಿಯಾಗಿ ಬರುತ್ತೇವೆ ಹೇಳುವವರು ಹೇಳುತ್ತಾರೆ ನ್ಯೂಸ್ ಮಾಡುವವರು ಮಾಡುತ್ತಾರೆ ನಾವು ಏನೂ ಮಾಡಲು ಆಗಲ್ಲ’ ಎಂದು ಊಡಾಫೆ ಉತ್ತರ ನೀಡಿ ಹೋಗಿದ್ದರು. ನಂತರ ಎಲ್ಲಾ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಬರುತ್ತಿದ್ದಾರೆ.

ಈ ಘಟನೆ ಮಾಸುವ ಮೊದಲೇ ಮತ್ತೊಂದು ಘಟನೆ ನಡೆದಿದ್ದು ಇದರ ಬಗ್ಗೆ ತಾಲೂಕು ವೈದ್ಯಾಧಿಕಾರಿ(ತಾಲೂಕು ಆರೋಗ್ಯಾಧಿಕಾರಿ) ಡಾ.ಕಲಾಮಧು ಶೆಟ್ಟಿ ಅವರಿಗೆ ಲಿಖಿತ ದೂರು ಬಂದಿದ್ದು, ಇದಕ್ಕೆ ಯಾವ ಸಾಬೂಬು ನೀಡಿ ಕೈ ತೊಳೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಾಗಿದೆ.

- Advertisement -
spot_img

Latest News

error: Content is protected !!