ಮಂಗಳೂರು: ರಾ.ಹೆ. 66ರ ನಂತೂರು ತಾರಾಯಿತೋಟ ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಮಾಯಕ ಸ್ಕೂಟರ್ ಸವಾರ, ಹಿರಿಯ ಛಾಯಾಗ್ರಾಹಕ ಕೆ.ಮೋಹನ್ ಚಂದರ್ (64) ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಧರ್ಮಸ್ಥಳದ ಕಾರ್ಯತಡ್ಕ ನಿವಾಸಿ ಗೋಪಾಲಕೃಷ್ಣ(27) ಎಂಬ ಯುವಕನ ಅಜಾರುಕತೆಯಿಂದ ಈ ಘಟನೆ ಸಂಭವಿಸಿದೆ. ಶನಿವಾರ ರಾತ್ರಿ ಸುಮಾರು 8.30 ಗಂಟೆ ವೇಳೆ ಗುರುಪುರದಿಂದ ಜಪ್ಪಿನಮೊಗರಿನ ತನ್ನ ಬಾಡಿಗೆ ರೂಮಿನ ಕಡೆಗೆ ಎಫ್ ಜೀ ಬೈಕನ್ನು ಅಪರಿಮಿತ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದು, ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಹಿರಿಯ ಛಾಯಾಗ್ರಾಹಕ ಮೋಹನ್ ಗಂಭೀರ ಗಾಯಗೊಂಡಿದ್ದರು.
ಅವರನ್ನು ಟೆಂಪೋ ಚಾಲಕ ಗಂಗಾಧರ ಅಂಬ್ಲಮೊಗರು ಎಂಬವರು ಸಾರ್ವಜನಿಕರ ಸಹಕಾರದಿಂದ ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಎರಡು ದಿವಸಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಮೋಹನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರು ಎಳೆದಿದ್ದಾರೆ.
ಮೋಹನ್ ಅವರ ಹಿರಿಯ ಮಗಳಿಗೆ ಇದೇ ಮೇ 10 ರಂದು ವಿವಾಹ ನಿಶ್ಚಯವಾಗಿದ್ದು ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಇದೀಗ ಮೋಹನ್ ಅವರ ಅಕಾಲಿಕ ಅಗಲಿಕೆಯಿಂದ ಸಂಭ್ರಮ ಮನೆ ಮಾಡಿದ್ದ ಮನೆಯಲ್ಲಿ ಸೂತಕ ಆವರಿಸಿದೆ.


