ಮೈಸೂರು; ಸದ್ಯ ರಾಜ್ಯ ರಾಜಕೀಯದಲ್ಲಿ ಹಾರಗಳ ಸದ್ದು ಜೋರಾಗಿದೆ. ಜೆಡಿಎಸ್ನ ಪಂಚರತ್ನ ಯಾತ್ರೆಯಲ್ಲಂತೂ ಕುಮಾರಸ್ವಾಮಿ ಅವರಿಗೆ ದಿನಕ್ಕೊಂದು ರೀತಿಯ ಹಾರ ಹಾಕಿ ಸ್ವಾಗತ ಕೋರಲಾಗುತ್ತಿದೆ. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಡಿಫರೆಂಚಟ್ ಹಾರವೊಂದು ಸಿದ್ಧವಾಗಿದೆ.
ಹೌದು… ಮೈಸೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಿನ್ನಲೆ ಮೈಸೂರು ಪಾಕ ಹಾರ ರೆಡಿಯಾಗಿದೆ.ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಬೃಹತ್ ಮೈಸೂರು ಪಾಕ್ ಹಾರ ತಯಾರಾಗಿದೆ.ಸಿದ್ದರಾಮಯ್ಯ ಕಟ್ಟಾ ಅಭಿಮಾನಿ ಕಾಳಿಸಿದ್ದನ ಹುಂಡಿ ಜೈ ಸ್ವಾಮಿಯವರು ಈ ಮೈಸೂರು ಪಾಕ್ ಹಾರವನ್ನ ಮಾಡಿಸಿದ್ದಾರೆ.
ಬೃಹತ್ ಹಾರಕ್ಕೆ ಬರೊಬ್ಬರಿ 750 ಕೆಜಿ ಮೈಸೂರು ಪಾಕ್ ಬಳಸಲಾಗಿದೆ. ಅಲ್ಲದೆ 750 ಕೆಜಿ ಮೈಸೂರು ಪಾಕ್ ಜೊತೆ 250ಕೆಜಿ ಹೂ ಸೇರಿದಂತೆ 1000 ಕೆಜಿ ತೂಕದ ಬೃಹತ್ ಹಾರ ಸಿದ್ಧವಾಗಿದೆ. ಸುಮಾರು 2.5 ಲಕ್ಷ ರೂ ವೆಚ್ಚದಲ್ಲಿ ಈ ಮೈಸೂರು ಪಾಕ್ ಹಾರ ತಯಾರಾಗುತ್ತಿದೆ.
ಮೈಸೂರಿನ ಧನರಾಜ್ ಎನ್ನುವವರು ಮೈಸೂರು ಪಾಕ್ ಹಾರವನ್ನ ತಯಾರು ಮಾಡುತ್ತಿದ್ದಾರೆ. 20 ಜನರ ತಂಡದಿಂದ ಸುಮಾರು 15 ಗಂಟೆಗಳ ಪರಿಶ್ರಮದಿಂದ ಮೈಸೂರು ಪಾಕ್ ಹಾರ ತಯಾರಿ ಕಾರ್ಯ ನಡೆಯುತ್ತಿದೆ. ಮೈಸೂರಿನ ಕಾಂಗ್ರೆಸ್ ಕಛೇರಿ ಮುಂಭಾಗ ಕ್ರೇನ್ ಮೂಲಕ ಸಿದ್ದರಾಮಯ್ಯಗೆ ಬೃಹತ್ ಮೈಸೂರು ಪಾಕ್ ಹಾರ ಸಮರ್ಪಣೆ ಮಾಡಲಿದ್ದಾರೆ.
