ದುಬೈ: ನಿನ್ನೆ ನಡೆದ ಐಪಿಎಲ್-2020ಯ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ ಮುಂಬೈ ತಂಡ ಗೆದ್ದು ಬೀಗಿದೆ. ಈ ಮೂಲಕ ಐದನೇ ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ.

ನಿನ್ನೆಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಅವರ ತಾಳ್ಮೆಯ ಆಟದಿಂದ ನಿಗದಿತ 20 ಓವರಿನಲ್ಲಿ 156 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾ ಅವರು ಸ್ಫೋಟಕ ಬ್ಯಾಟಿಂಗ್‍ನಿಂದ ಇನ್ನೂ 8 ಬಾಲ್ ಬಾಕಿಯಿದ್ದಂತೆ ಮುಂಬೈ 157 ರನ್ ಬಾರಿಸಿ ಟ್ರೋಫಿ ಗೆದ್ದುಕೊಂಡಿತು.
ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‍ನಲ್ಲಿ ಐದು ಬಾರೀ ಚಾಂಪಿಯನ್ ಆಗಿ ದಾಖಲೆ ಬರೆದಿದೆ. ಮುಂಬೈ 2013, 2015, 2017 ಮತ್ತು 2019ರಲ್ಲಿ ಕಪ್ ಗೆದ್ದು ಅತೀ ಹೆಚ್ಚು ಬಾರೀ ಐಪಿಎಲ್ ಟ್ರೋಫಿ ಗೆದ್ದ ತಂಡವಾಗಿತ್ತು. ಈಗ ಈ ಬಾರಿಯು ಕಪ್ ಗೆದ್ದು, ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡ ಎಂಬ ದಾಖಲೆ ಬರೆದಿದೆ. ಜೊತೆಗೆ ನಾಯಕನಾಗಿ ರೋಹಿತ್ ಅವರು ಕೂಡ ಐದು ಬಾರೀ ಐಪಿಎಲ್ ಟ್ರೋಫಿ ಗೆದ್ದ ಕ್ಯಾಪ್ಟನ್ ಎಂಬ ಖ್ಯಾತಿ ಪಡೆದಿದ್ದಾರೆ.
ಡೆಲ್ಲಿ ನೀಡಿದ 157 ರನ್ ಗುರಿಯನ್ನು ಬೆನ್ನಟ್ಟಲು ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡ ಡಿಸೆಂಟ್ ಓಪನಿಂಗ್ ಪಡೆದುಕೊಂಡಿತು. ಆದರೆ ತಂಡದ ಮೊತ್ತ 45 ರನ್ ಆಗಿದ್ದಾಗ ಕ್ವಿಂಟನ್ ಡಿ ಕಾಕ್ ಅವರು ಮಾರ್ಕಸ್ ಸ್ಟೋಯಿನಿಸ್ ಅವರ ಬೌಲಿಂಗ್‍ನಲ್ಲಿ ಔಟ್ ಆದರು. ಈ ಮೂಲಕ ಪವರ್ ಪ್ಲೇ ಹಂತದಲ್ಲಿ ಒಂದು ವಿಕೆಟ್ ಕಳೆದುಕೊಂಡರು ಮುಂಬೈ ಇಂಡಿಯನ್ಸ್ ಆರು ಓವರ್ ಮುಕ್ತಾಯಕ್ಕೆ ಬರೋಬ್ಬರಿ 61 ರನ್ ಸಿಡಿಸಿತು.