ಮುಂಬಾಯಿ: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಕೊರೋನಾ ವೈರಸ್ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಒಟ್ಟು 5,589 ಮಂದಿಯಲ್ಲಿ ಸೋಂಕು ದೃಢಗೊಂಡಿದೆ . ಅಲ್ಲದೆ, 219 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 15 ಮಂದಿ ಬಲಿಯಾಗಿದ್ದು, ಇದರಲ್ಲಿ 8 ಮಂದಿ ಪುರುಷಕರು ಹಾಗೂ 7 ಮಂದಿ ಮಹಿಳೆಯರಾಗಿದ್ದಾರೆ. ಇದರಲ್ಲಿ ಮೂವರು 40 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದು, ಇನ್ನು ನಾಲ್ವರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಇನ್ನುಳಿದ 8 ಮಂದಿ 40 ರಿಂದ 60 ವರ್ಷದೊಳಗಿನವರಾಗಿದ್ದಾರೆಂದು ಬಿಎಂಸಿ ಮಾಹಿತಿ ನೀಡಿದ್ದಾರೆ.
ಈ ನಡುವೆ 118 ಮಂದಿ ಸೋಂಕಿತರು ಚಿಕಿತ್ಸೆ ಪಡೆದು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯೊಂದಿದ್ದಾರೆ. ಇದರೊಂದಿಗೆ ಗುಣಮುಖರಾಗಿರುವವರ ಸಂಖ್ಯೆ 1,015ಕ್ಕೆ ಏರಿಕೆಯಾಗಿದೆ. ಈ ನಡುವೆ ಏಪ್ರಿಲ್ 23 ಮತ್ತು 24 ರಂದು 395 ಮಂದಿ ಸೋಂಕಿತರ ಪೈಕಿ 107 ಮಂದಿಯ ಪರೀಕ್ಷೆಗಳನ್ನು ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸಲಾಗಿದೆ. ಎಲ್ಲಾ ಸೋಂಕಿತನ್ನೂ ಐಸೋಲೇಷನ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದೆ.
ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು 1200 ಬೆಡ್ ಇರುವ ಕೇಂದ್ರವನ್ನು ಆರಂಭಿಸಲು ಯೋಜನೆ ರೂಪಿಸಲಾಗುತ್ತಿದೆ. ಇದರಲ್ಲಿ 1000 ಬೆಡ್ ಗಳಲ್ಲಿ ಆಕ್ಸಿಜನ್ ಸಪೋರ್ಟ್ ನೀಡಲಾಗಿರುತ್ತದೆ ಎಂದು ತಿಳಿಸಿದೆ.
ಪ್ರಸ್ತುತ ಬೆಳಕಿಗೆ ಬಂದಿರುವ 395 ಮಂದಿಯ ಪೈಕಿ 13 ಮಂದಿಯಲ್ಲಿ ಈಗಾಗಲೇ ವೈರಸ್ ಪಾಸಿಟಿವ್ ಬಂದಿದ್ದು, ಈ ಎಲ್ಲಾ ಪ್ರಕರಣಗಲು ಧರವಿಯಲ್ಲಿಯೇ ಬೆಳಕಿಗೆ ಬಂದಿದೆ. ಇದರಿಂದಾಗಿ ಕೊಳಗೇರಿ ಪ್ರದೇಶವಾಗಿರುವ ಈ ಪ್ರದೇಶದಲ್ಲಿ ಈ ವರೆಗೂ 288 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ.