ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನು ವಕ್ಫ್ ಆಸ್ತಿಗೆ ನೋಂದಣಿಗೆ ಸಂಬಂಧಿಸಿದಂತೆ ಆಗುತ್ತಿರುವ ತೊಂದರೆ ಮತ್ತು ತೊಂದರೆಗೆ ಒಳಗಾಗಿರುವ ರೈತರ ಅಹವಾಲನ್ನು ಆಲಿಸಲು ರಾಜ್ಯ ಬಿಜೆಪಿ ವತಿಯಿಂದ ತಂಡವನ್ನು ರಚಿಸಲಾಗಿದೆ.
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಬೆಳ್ತಂಗಡಿ ಶಾಸಕ ಮತ್ತು ಬಿಜೆಪಿ ಯುವ ಮೋರ್ಛಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಂಜ, ಹುಬ್ಬಳ್ಳಿ-ಧಾರವಾಡ ಕೇಂದ್ರ ಶಾಸಕ ಮಹೇಶ್ ಟೆಂಗಿನಕಾಯಿ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಮತ್ತು ಬಿಜೆಪಿ ರೈತ ಮೋರ್ಛಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ತಂಡದ ಸದಸ್ಯರಾಗಿದ್ದಾರೆ.

ಐದು ಸದಸ್ಯರ ತಂಡವನ್ನು ರಚಿಸಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.ಅಕ್ಟೋಬರ್ 29 ರಂದು ತಂಡ ವಿಜಯಪುರ ಜಿಲ್ಲೆಗೆ ಭೇಟಿ ನೀಡಲಿದ್ದು, ರೈತರ ಸಮಸ್ಯೆಯ ಸಮಗ್ರ ವರದಿಯನ್ನು ಸಮಿತಿ ಬಿಜೆಪಿ ರಾಜ್ಯ ಘಟಕಕ್ಕೆ ಸಲ್ಲಿಸಲಿದೆ.
ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನನ್ನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನೋಂದಣಿ ಮಾಡಲಾಗಿದೆ ಎಂದು ರೈತರು ತೀವ್ರ ಆತಂಕಿತರಾಗಿ ಜಿಲ್ಲಾಡಳಿತದ ಮುಂದೆ ಪ್ರತಿಭಟನೆಯನ್ನು ನಡೆಸಿದ್ದಾರೆ.


