ಕುಂಬಳೆ: ಇಲ್ಲಿನರಿಕ್ಷಾ ಚಾಲಕ ಮತ್ತು ಬಾಲಕಿ ಕಳೆದ ಫೆ. 11ರಿಂದ ನಾಪತ್ತೆಯಾಗಿದ್ದು, ಇದೀಗ ಇಬ್ಬರು ಕುಡಾಲು ಮೇರ್ಕಳ ಗ್ರಾಮದ ಮಂಡೆಕಾಪುವಿನ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ನಾಪತ್ತೆಯಾದವರು ಮಂಡೆಕಾಪುವಿನ ದಿ| ಗಣಪತಿ ಅವರ ಪುತ್ರ, ರಿಕ್ಷಾ ಚಾಲಕ ಪ್ರದೀಪ್ (42) ಮತ್ತು ಮನೆಪಕ್ಕದ 15ರ ಹರೆಯದ ಹೈಸ್ಕೂಲು ವಿದ್ಯಾರ್ಥಿನಿ. ಇದೀಗ ಇವರಿಬ್ಬರ ಶವಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದವು.
ಪ್ರಕರಣದ ವಿವರ: ಬಾಲಕಿಯು ನಾಪತ್ತೆಯಾದ ಮರುದಿನ ಆಕೆಯ ಮನೆಯವರು ಕುಂಬಳೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಸಲ್ಲಿಸಿದ್ದರು. ಬಾಲಕಿಯ ಮನೆ ಪಕ್ಕದ ರಿಕ್ಷಾ ಚಾಲಕ ಪ್ರದೀಪ್ ಇದೇ ಸಮಯದಲ್ಲಿ ನಾಪತ್ತೆಯಾಗಿದ್ದು, ಇವರಿಬ್ಬರ ಮೊಬೈಲ್‌ಗಳು ಕೂಡ ಸ್ವಿಚ್ ಆಫ್ ಆಗಿದ್ದವು. ಬಳಿಕ ಬಾಲಕಿಯ ಮನೆಯವರು ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಘಟನೆಯ ಕುರಿತಂತೆ ಸಕ್ರಿಯರಾದ ಪೊಲೀಸರು ವಿಶೇಷ ತಂಡ ರಚಿಸಿದ್ದು, ಡ್ರೋನ್ ಬಳಸಿ ಸ್ಥಳೀಯರ ಸಹಕಾರದೊಂದಿಗೆ ಹುಡುಕಾಡುತ್ತಿದ್ದಾಗ ಇಬ್ಬರೂ ಒಂದೇ ಮರದಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ನಾಪತ್ತೆಯಾದ ಕೆಲವೇ ದಿನಗಳಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.
ಇನ್ನು ರಿಕ್ಷಾ ಚಾಲಕ ಪ್ರದೀಪ್ ಆಗಾಗ ಬಾಲಕಿಯ ಮನೆಗೆ ತೆರಳುತ್ತಿರುವುದಲ್ಲದೆ ಕೆಲವು ಬಾರಿ ಆಕೆಯನ್ನು ತನ್ನ ರಿಕ್ಷಾದಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ಎನ್ನುವ ವಿಚಾರ ಕೂಡ ಹೊರಬಂದಿದ್ದು, ಇವರಿಬ್ಬರೂ ಪರಸ್ಪರ ಸಲುಗೆಯಿಂದಿದ್ದು, ಮುಂದೆ ವಿವಾಹ ಆಲೋಚನೆಯಲ್ಲಿದ್ದರು. ಆದರೆ ಇದಕ್ಕೆ ಬಾಲಕಿಯ ಮನೆಯವರು ಒಪ್ಪದೇ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಇವರಿಬ್ಬರ ಶವ ಪತ್ತೆಯಾದ ಸ್ಥಳದಲ್ಲಿ ಎರಡು ಮೊಬೈಲ್ ಫೋನ್‌ಗಳು ಮತ್ತು ಒಂದು ಕತ್ತಿ ಪತ್ತೆಯಾಗಿದೆ. ತನಿಖೆಯಲ್ಲಿ ಕಾಸರಗೋಡು ಡಿವೈಎಸ್‌ಪಿ ಸುನಿಲ್ ಕುಮಾರ್, ಕುಂಬಳೆ ಸಿಐ ವಿನೋದ್ ಕುಮಾರ್, ಕಾಸರಗೋಡು ಮಹಿಳಾ ಪೊಲೀಸ್, ವಿದ್ಯಾನಗರ, ಬದಿಯಡ್ಕ, ಮಂಜೇಶ್ವರ ಪೊಲೀಸ್ ಠಾಣೆಗಳ ಅಧಿಕಾರಿಗಳು ಭಾಗಿಯಾದರು.


