ಮಂಗಳೂರು: ನಗರದ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ‘ಮಂಜು ಪ್ರಾಸಾದ’ ಆವರಣದಲ್ಲಿ ಜೂನ್ 20 ಮತ್ತು 21ರಂದು ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ವಿಶಿಷ್ಟ ತಳಿಗಳ ಸಮೃದ್ಧ ಸಾವಯವ ಮಾವು ಮತ್ತು ಹಲಸು ಮೇಳವನ್ನು ಆಯೋಜಿಸಲಾಗಿದೆ.
‘ನಾಡು ನುಡಿ ಜಾಗೃತಿ ಸಮ್ಮೇಳನ’ ಸರಣಿ ಕಾರ್ಯಕ್ರಮದ ಅಂಗವಾಗಿ ಕಲ್ಕೂರ ಪ್ರತಿಷ್ಠಾನ ಮತ್ತು ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಈ ಮೇಳ ನಡೆಯಲಿದ್ದು, ಬೆಳೆಗಾರರು ಹಾಗೂ ಗ್ರಾಹಕರಿಗೆ ಇಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಜೂನ್ 20ರಂದು ಬೆಳಗ್ಗೆ 10 ಗಂಟೆಗೆ ಜಿತಕಾಮಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶರವು ರಾಘವೇಂದ್ರ ಶಾಸ್ತ್ರಿಯವರು ದೀಪ ಪ್ರಜ್ವಲನೆ ಮಾಡಲಿದ್ದು, ಡಾ. ಎಂ.ಬಿ. ಪುರಾಣಿಕ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಪ್ರಸಿದ್ಧ ವೈದ್ಯ ಡಾ. ಜೀವರಾಜ ಸೊರಕೆಯವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.


