
ಮಂಗಳೂರು: ಬೋಳೂರು ಮೀನುಗಾರಿಕಾ ದಕ್ಕೆಯಿಂದ ತಣ್ಣೀರುಬಾವಿ–ಬೆಂಗ್ರೆ ಕಡೆಗೆ ಸಂಪರ್ಕ ಕಲ್ಪಿಸಲು ನಿರ್ಮಾಣ ಹಂತದಲ್ಲಿರುವ ಸೇತುವೆಯ ಕಾಮಗಾರಿ ವೇಳೆ ಭಾರಿ ಅವಘಡವೊಂದು ಸಂಭವಿಸಿದೆ. ಪಿಲ್ಲರ್‌ಗೆ ಜೋಡಿಸುತ್ತಿದ್ದ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ಆಯತಪ್ಪಿ ನದಿಗೆ ಉರುಳಿಬಿದ್ದಿದ್ದು, ಘಟನೆಯಲ್ಲಿ ಮೀನುಗಾರಿಕಾ ಬೋಟ್ ಜಖಂಗೊಂಡು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಶುಕ್ರವಾರ (ನ. 27) ಈ ದುರ್ಘಟನೆ ನಡೆದಿದೆ.
ಸೇತುವೆಯ ಪಿಲ್ಲರ್‌ಗಳ ಮೇಲ್ಭಾಗಕ್ಕೆ ಕ್ರೇನ್ ಸಹಾಯದಿಂದ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಸುವ ಕಾರ್ಯ ಭರದಿಂದ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಆಯತಪ್ಪಿದ ಬೃಹತ್ ಸ್ಲ್ಯಾಬ್, ಕ್ರೇನ್ ಸಮೇತ ನದಿ ನೀರಿಗೆ ಉರುಳಿಬಿದ್ದಿದೆ.
ಸ್ಲ್ಯಾಬ್ ಬಿದ್ದ ರಭಸಕ್ಕೆ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಹರೀಶ್ ಎಂಬುವವರಿಗೆ ಸೇರಿದ ಮೀನುಗಾರಿಕಾ ಬೋಟ್ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್, ಘಟನೆಯ ಸಮಯದಲ್ಲಿ ಬೋಟ್‌ನೊಳಗೆ ಯಾರೂ ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ಭಾರಿ ಪ್ರಾಣಾಪಾಯ ತಪ್ಪಿದಂತಾಗಿದೆ. ಅವಘಡದಲ್ಲಿ ಸ್ಥಳದಲ್ಲಿದ್ದ ಇಬ್ಬರು ಕ್ರೇನ್ ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


