ಮಂಗಳೂರು, ಮೇ 04 : ರಾಜ್ಯದಲ್ಲಿ ಇಂದಿನಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. 48 ದಿನಗಳ ನಂತರ ರಾಜ್ಯಾದ್ಯಂತ ಮದ್ಯದಂಗಡಿಗಳು ತೆರೆಯುತ್ತಿದ್ದು, ಇಂದು ಬೆಳಿಗ್ಗೆಯಿಂದ ವೈನ್ ಸ್ಟೋರ್ ಗಳು, ಎಂಆರ್ ಪಿ ಮದ್ಯದಂಗಡಿಗಳು ಆರಂಭವಾಗಿವೆ. ಬೆಳಿಗ್ಗಿನಿಂದಲೇ ಮದ್ಯದಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ಜನ ನಿಂತಿದ್ದಾರೆ. ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿದ್ದು, ಲಾಕ್‌ಡೌನ್ ನಿಯಮಗಳನ್ನು ಪಾಲಿಸುವುದರೊಂದಿಗೆ ಮದ್ಯ ಖರೀದಿಗೆ ಅವಕಾಶ ಮಾಡಲಾಗಿದೆ.
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ವೈನ್ ಶಾಪ್‌ಗಳ ಮುಂದೆ ಮದ್ಯಪ್ರಿಯರು ಸಾಲು ನಿಂತಿದ್ದಾರೆ. ಕೊರೊನಾ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾದ ಕಾರಣ ಹಲವು ವೈನ್ ಶಾಪ್‌ಗಳ ಮುಂದೆ ಭಾನುವಾರವೇ ಗ್ರಾಹಕರು ನಿಲ್ಲಲು ಸ್ಥಳಕ್ಕೆ ಗುರುತು ಹಾಕಲಾಗಿದ್ದು ಕೆಲವರಂತು ಇದ್ದ ಸ್ಟಾಕ್‌ಗಳು ಖಾಲಿಯಾಗಬಹುದೆಂಬ ಭಯಕ್ಕೋ ಏನೋ ಭಾನುವಾರವೇ ವೈನ್ ಶಾಪ್‌ಗಳ ಮುಂದೆ ಬಂದು ನಿಂತಿದ್ದಾರೆ.
ಉಡುಪಿಯಲ್ಲೂ ಮದ್ಯ ಖರೀದಿಗೆ ಜನರ ದುಂಬಾಲು
ಉಡುಪಿ ಜಿಲ್ಲೆಯಲ್ಲಿ ಮದ್ಯ ಕೊಂಡುಕೊಳ್ಳಲು ಬೆಳಿಗ್ಗಿನಿಂದಲೇ ಮದ್ಯಪ್ರಿಯರು ಕಾದು ನಿಂತಿದ್ದರು. ಈ ಸಂದರ್ಭದಲ್ಲಿ ಕೆಲವೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಉಡುಪಿಯ ಹಲವೆಡೆಗಳಲ್ಲಿ ಭದ್ರತೆ ಮತ್ತು ಕಾನೂನು ಪಾಲನೆ ದೃಷ್ಟಿಯಿಂದ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ವೈನ್ ಶಾಪ್ ಗಳ ಮುಂದೆ ಮೀಟರ್ ಅಂತರದಲ್ಲಿ ಸರ್ಕಲ್ ಮಾರ್ಕ್ ಹಾಕಲಾಗಿದೆ. ಗ್ರಾಹಕರು ಅದರಲ್ಲಿ ನಿಂತು ಮದ್ಯ ಖರೀದಿಸಬೇಕಾಗಿದೆ.