ಮಂಗಳೂರು : ವೈದ್ಯರ ಸಲಹಾ ಚೀಟಿ ಇಲ್ಲದೆ ಶೀತ, ಕೆಮ್ಮು, ನೆಗಡಿ, ಜ್ವರ ಹಾಗೂ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಪ್ಯಾರಾಸಿಟಮಾಲ್ ಅಂಶ ಇರುವ ಯಾವುದೇ ರೀತಿಯ ಔಷಧಿಗಳನ್ನು ಪೂರೈಕೆ ಮಾಡಬಾರದು ಎಂದು ಮಂಗಳೂರು ಪ್ರಾದೇಶಿಕ ಕಚೇರಿ ಉಪ ಔಷಧ ನಿಯಂತ್ರಕರು ಔಷಧ ವ್ಯಾಪಾರಸ್ಥರಿಗೆ ತಿಳಿಸಿದ್ದಾರೆ.
ಕೊರೊನಾ ಸೋಂಕು ಪತ್ತೆಹಚ್ಚಲು, ರೋಗ ಹರಡುವುದನ್ನು ತಡೆಗಟ್ಟಲು ಹಾಗೂ ನಿಯಂತ್ರಣ ಮಾಡುವ ಉದ್ದೇಶದಿಂದ ಈ ಆದೇಶವನ್ನು ಹೊರಡಿಸಲಾಗಿದೆ.
ಹಾಗೆಯೇ ವೈದ್ಯರ ದಲಹಾ ಚೀಟಿ ಮುಖಾಂತರ ಔಷಧ ನೀಡಿದಲ್ಲಿ ಆ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವೈದ್ಯರ ಹೆಸರು, ವಿಳಾಸವನ್ನು ಕಡ್ಡಾಯವಾಗಿ ಪಡೆದು ಮಾರಾಟ ರಶೀದಿಗಳಲ್ಲಿ ನಮೂದಿಸಬೇಕು ಎಂದು ಸೂಚಿಸಿದ್ದಾರೆ.
ಇದನ್ನು ಉಲ್ಲಂಘನೆ ಮಾಡಿದ್ದಲ್ಲಿ ಔಷಧ ಹಾಗೂ ಕಾಂತಿವರ್ಧಕಗಳ ಅಧಿನಿಯಮ- 1940 ಅಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನೋಂದಾಯಿತ ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧ ಖರೀದಿಗಾಗಿ ಬಂದಲ್ಲಿ ಈ ಬಗ್ಗೆ ಆರೋಗ್ಯ ಇಲಾಖೆಗೆ ಕಡ್ಡಾಯವಾಗಿ ತಿಳಿಸಬೇಕು ಎಂದು ಕೂಡಾ ಔಷಧ ವ್ಯಾಪಾರಸ್ಥರಿಗೆ ಪ್ರಕಟನೆಯ ಮೂಲಕ ಆದೇಶಿಸಲಾಗಿದೆ.