ಮಂಗಳೂರು: ಹಡಗೊಂದರ ಸಿಬ್ಬಂದಿ ವಿಯೆಟ್ನಾಂ ಮೂಲದ ಬಾಣಸಿಗರೊಬ್ಬನಿಗೆ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೃದಯ ಚಿಕಿತ್ಸೆ ನೀಡುವ ಮೂಲಕ ಅವರ ಜೀವ ಉಳಿಸಿದ ಘಟನೆ ಸಂಭವಿಸಿದೆ.
ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ 19 ಸದಸ್ಯರನ್ನು ಒಳಗೊಂಡ ಹಡಗೊಂದರ ಸಿಬಂದಿಯಾಗಿದ್ದು, ಈತನಿಗೆ 39 ವರ್ಷ ವಯಸ್ಸಾಗಿತ್ತು. ಈತನ ಹಡಗು ಮಂಗಳೂರಿನ ಬಂದರಿನಲ್ಲಿ ಲಂಗರು ಹಾಕಿದ್ದು, ಆ ಸಂದರ್ಭದಲ್ಲಿ ಈತನಿಗೆ ಹೃದಯಾಘಾತ ಸಂಭವಿಸಿತ್ತು. ನಂತರದಲ್ಲಿ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರೋಗಿಯು ರಾತ್ರಿ ವೇಳೆ ಮತ್ತೆ ರಕ್ತದ ಹರಿವಿನ ಸಮಸ್ಯೆಗೆ(ಮರು-ಇನ್‌ಫ್ರಾಕ್ಷನ್) ತುತ್ತಾಗಿದ್ದರಿಂದ ಅವರಿಗೆ ತುರ್ತು ಆಂಜಿಯೋಪ್ಲಾಸ್ಟಿ ಮಾಡಬೇಕಾಗಿತ್ತು. ಕೆಎಂಸಿ ಆಸ್ಪತ್ರೆಯ ಹಿರಿಯ ಇಂಟರ್‌ವೆನಂನಲ್ ಕಾರ್ಡಿಯಾಲಜಿಸ್ಟ್ ಡಾ| ಪದ್ಮನಾಭ ಕಾಮತ್ ನೇತೃತ್ವದ ವಿಶೇಷ ವೈದ್ಯಕೀಯ ತಂಡ ಡಾ| ಐಶ್ವರ್ಯಾ ಮತ್ತು ಡಾ| ಲಾವಣ್ಯಾ ಸಹಿತ ನುರಿತ ಅರಿವಳಿಕೆ ತಂಡದೊಂದಿಗೆ ತುರ್ತು ಕಾರ್ಯವಿಧಾನವನ್ನು ನಿರ್ವಹಿಸಿತು.


