ಮಂಗಳೂರು: ನಗರದ ಖಾಸಗಿ ಟಿವಿ ಚಾನಲ್ ವೊಂದರ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಜೊತೆ ಚಿಕ್ಕಮಗಳೂರು ಮೂಲದ ಬಿಜೆಪಿ ಕಾರ್ಯಕರ್ತೆಯೊಬ್ಬರು ಕರೆ ಮಾಡಿ ಪ್ರಶಂಶಿಸಿ ಮಾತನಾಡಿದ್ದ ಆಡಿಯೋವೊಂದನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ತೇಜೋವಧೆ ಮಾಡಿದ್ದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿಯನ್ನು ಬರ್ಕೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ರವಿವಾರ ನಡೆದ ಖಾಸಗಿ ಟಿವಿ ಚಾನೆಲ್‌ವೊಂದರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಕರೆ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಪ್ರಶಂಶೆ ವ್ಯಕ್ತಪಡಿಸಿ ಪಕ್ಷ ಕಟ್ಟುವಾಗ ಇಂತಹ ಸಮಸ್ಯೆ ಎದುರಾಗುತ್ತದೆ. ಟೀಕೆಯನ್ನು ಗಂಭೀರವಾಗಿ ಪರಿಗಣಿಸದೆ ಜವಾಬ್ದಾರಿ ನಿಭಾಯಿಸಿ ಎಂದಿದ್ದರು. ಆದರೆ, ಆ ಆಡಿಯೋವನ್ನು ಸುನಿಲ್ ಬಜಿಲಕೇರಿ ತಿರುಚಿದ ದೂರಿನ ಮೇರೆಗೆ ಬಂಧಿಸಲಾಗಿದೆ.
ಯುವತಿಯೊಬ್ಬಳು ಈ ಹಿಂದೆ ಯಾರಿಗೋ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಆಡಿಯೋವನ್ನು ನಳಿನ್ ಕುಮಾರ್ ಕಟೀಲ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ ಎಂಬಂತೆ ಬಿಂಬಿಸಲಾಗಿತ್ತು. ವೀಡಿಯೋ ತಿರುಚಿ ಅಪ್‌ಲೋಡ್ ಮಾಡಿದ ಬಗ್ಗೆ ಸ್ಥಳೀಯ ಚಾನೆಲ್‌ನ ಮ್ಯಾನೇಜರ್ ಪ್ರವೀಣ್ ಬರ್ಕೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ತಿರುಚಿದ ವಿಡಿಯೋ ಅಪ್‌ಲೋಡ್‌ಗೆ ಸಂಬಂಧಿಸಿ ಸುನಿಲ್ ಬಜಿಲಕೇರಿಯನ್ನು ಬಂಧಿಸಿದ್ದಾರೆ.
ಸುನಿಲ್ ಬಜಿಲಕೇರಿ ವಿರುದ್ಧ (ಸೆ.426, 465, 469, 501, 505) ಮೊಬೈಲ್ ದುರ್ಬಳಕೆ, ಮಾನಹಾನಿ, ಧ್ವನಿಮುದ್ರಣ ತಿರುಚಿದ ಆರೋಪ ಸೇರಿದಂತೆ ಸೆ.153(ಧರ್ಮಗಳ ನಡುವೆ ದ್ವೇಷ)ಕಠಿಣ ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿಯೇ ಸುನಿಲ್ ಬಜಿಲಕೇರಿಯನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದ ಪೊಲೀಸರು ಬುಧವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿದ್ದರು. ಅದರಂತೆ ನ್ಯಾಯಾಧೀಶರು ಆರೋಪಿ ಸುನಿಲ್ ಬಜಿಲಕೇರಿಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.